ಶಂಕರನಾರಾಯಣ, ಸೆ 2 (DaijiworldNews/MS): ಶಂಕರನಾರಾಯಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳಂಜೆ ಮಾವಿನಕೊಡ್ಲು ನಿವಾಸಿ ಪುಟ್ಟಯ್ಯ ನಾಯ್ಕರು ಪರಂಪರಿಕ ಕೃಷಿ ಪದ್ದತಿಯ ಜೊತೆಯಲ್ಲಿ ಹೊಸತನ, ಸುಧಾರಿತ ಕೃಷಿ ಪದ್ದತಿಗಳ ಅಳವಡಿಕೆಯೊಂದಿಗೆ ಕಾಲಮಾನಕ್ಕೆ ತಕ್ಕ ತರಕಾರಿ ಕೃಷಿ ಮಾಡುತ್ತಾ ಯಶಸ್ವಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ತರಕಾರಿ ಕೃಷಿಯ ಜೊತೆಗೆ ತೋಟಗಾರಿಕೆಯಲ್ಲಿ ಮಿಶ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಯಶಸ್ವಿನ ದಾಪುಗಾಲಿಟ್ಟಿದ್ದಾರೆ.
ಮಾವಿನಕೊಡ್ಲು ಕುಗ್ರಾಮ ಪ್ರದೇಶ. ಅಲ್ಲಿರುವ ಪುಟ್ಟಯ್ಯ ನಾಯ್ಕರ ಜಮೀನು ಕೂಡಾ ಫಲವತ್ತಾದ ಕೃಷಿ ಭೂಮಿಯಲ್ಲ. ಶಿಲೆ ಕಲ್ಲು ಪದರಗಳನ್ನು ಹೊಂದಿರುವ ಇಳಿಜಾರು ಪ್ರದೇಶ. ಮಣ್ಣಿನ ಕಣ ತೀರಾ ಅಪರೂಪವಾದ ಗಟ್ಟಿ ಕಲ್ಲು ಹೊಂದಿರುವ ಸಮತಲವಲ್ಲದ ಬರಡು ಭೂಮಿಯಲ್ಲಿ ತರಕಾರಿ ಕೃಷಿ ಮಾಡುವ ಮೂಲಕ ಮಾನವ ಪ್ರಯತ್ನದಿಂದ ಅಸಾಧ್ಯವೆಂಬುದು ಗೌಣ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.
ಕೃಷಿಕ ಸೋಲುವುದು ಪರಿಸರ ಹಾಗೂ ಋತುಗಳ ಅರಿವು ಇಲ್ಲದಾಗ. ಯಾವ ಋತುಮಾನಕ್ಕೆ ಯಾವ ಬೆಳೆ ಸೂಕ್ತ? ಆಗ ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಉತ್ತಮ ಧಾರಣೆ ಸಿಗುತ್ತದೆ? ಆ ಹವಾಮಾನ ಯಾವ ಬೆಳೆಗೆ ಅನುಕೂಲವಾಗುತ್ತದೆ ? ಎನ್ನುವ ಸಾಮಾನ್ಯ ಜ್ಞಾನದೊಂದಿಗೆ ತರಕಾರಿ ಕೃಷಿ ಮಾಡಿದರೆ ಹೆಚ್ಚಿನ ಲಾಭ ಸಾಧ್ಯ. ಮಾತ್ರವಲ್ಲ ಬೆಳೆದ ಬೆಳೆಯನ್ನು ಬೆಳದಾತನೇ ನೇರ ಗ್ರಾಹಕರಿಗೆ ತಲುಪಿಸಿದಾಗ ಗರಿಷ್ಠ ಲಾಭ ಪಡೆಯಬಹುದು ಎನ್ನುವುದಕ್ಕೆ ಪುಟ್ಟಯ್ಯ ನಾಯ್ಕ ಉತ್ತಮ ಉದಾಹರಣೆ.
ಪುಟ್ಟಯ್ಯ ನಾಯ್ಕರು ಮುಂಗಾರು ಹಂಗಾಮಿನಲ್ಲಿ ಬೆಂಡೆ, ಹಾಗಲ, ಹೀರೆ, ಪಡುವಲ, ಸಾಂಬ್ರಾಣಿ, ಅಲಸಂಡೆ, ಸೋರೆ ಹೀಗೆ ಎಲ್ಲ ಸ್ಥಳೀಯ ಬೇಡಿಕೆಯ ತರಕಾರಿಗಳನ್ನು ಬೆಳೆಯುತ್ತಾರೆ. ತಳಿ ಬದಲಾವಣೆ ಹಾಗೂ ಬೆಳೆ ಬದಲಾವಣೆಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯತೆಗಳನ್ನು ಕಂಡುಕೊಂಡಿರುವ ಇವರು ಸ್ಥಳೀಯ ಪ್ರಾದೇಶಿಕವಾದ ತರಕಾರಿಗಳು ಒಳ್ಳೆಯ ಫಲ ಕೊಡುತ್ತವೆ. ಹಾಗಲ, ಪಡುವಲಕ್ಕೆ ಉತ್ತಮ ಬೇಡಿಕೆ ಇದೆ. ಬೆಂಡೆಯೂ ಕೂಡಾ ಮಳೆಗಾಲದಲ್ಲಿ ಒಳ್ಳೆಯ ಬೆಲೆ ಇದೆ. ಇದರೊಂದಿಗೆ ಮೆಣಸು, ಸಾಂಬ್ರಾಣಿ, ಕೆಸು ಇತ್ಯಾದಿಯನ್ನು ಕೂಡಾ ಹಾಕುತ್ತಾರೆ. ಒಂದು ಎಕ್ರೆ ಜಮೀನಿನಲ್ಲಿ ಒಂದೊಂದು ಇಂಚು ಕೂಡಾ ಅಮೂಲ್ಯ ಎಂಬಂತೆ ಸಮ್ಮಿಶ್ರವಾದ ತರಕಾರಿಗಳನ್ನು ಅವರ ಜಮೀನಿನಲ್ಲಿ ಕಾಣಬಹುದು. ಒಂದೇ ಬೆಳೆಗೆ ಅವಲಂಬಿತವಾಗದೇ ವಿಧವಿಧ ಬೆಳೆಗಳು, ಬೇರೆ ಬೇರೆ ಸಮಯದಲ್ಲಿ ನಾಟಿ ಮಾಡುವುದರಿಂದ ಸಮತೋಲನ ಇರುತ್ತದೆ. ಮಾರುಕಟ್ಟೆಯೂ ಉತ್ತಮವಾಗಿರುತ್ತದೆ ಎನ್ನುವುದನ್ನು ಇವರು ಕಂಡುಕೊಂಡಿದ್ದಾರೆ.
ಮಾದರಿ ಪ್ರಗತಿಬಂಧು:
ಪುಟ್ಟಯ್ಯ ನಾಯ್ಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯ. ಯೋಜನೆ ತಾಲೂಕಿಗೆ ಕಾಲಿಟ್ಟಾಗಲೇ ಇವರು ಅನ್ನಪೂರ್ಣೇಶ್ವರಿ ಎನ್ನುವ ಪ್ರಗತಿಬಂಧು ಸ್ವಸಹಾಯ ಸಂಘವನ್ನು ರಚಿಸಿಕೊಂಡು ಶ್ರಮ ವಿನಿಮಯ ಆರಂಭಿಸಿದರು. ಈಗ ಆ ಸಂಘಕ್ಕೆ 17ರ ಹರೆಯ. ಯೋಜನೆಯ ಮಾರ್ಗದರ್ಶನ, ಆರ್ಥಿಕ ನೆರವು, ಸಾಲಸೌಲಭ್ಯ, ಹಲವು ಪ್ರಾತ್ಯಕ್ಷಿಕೆಗಳ ಪ್ರಯೋಜನ, ತರಬೇತಿ ಪಡೆದುಕೊಂಡಿದ್ದಾರೆ. ಇವರ ಕೃಷಿ ಕ್ಷೇತ್ರಕ್ಕೆ ಹಲವಾರು ಕಡೆಗಳಿಂದ ಅಧ್ಯನಾರ್ಥಿಗಳು ಭೇಟಿ ನೀಡಿದ್ದಾರೆ. ಕೃಷಿಗೆ ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ಅವರು ಸಕಾಲಿಕ ಮಾಹಿತಿ ಮಾರ್ಗದರ್ಶನ ನೀಡುತ್ತಾರೆ. ಯೋಜನೆಯ ಅಧಿಕಾರಿವರ್ಗ, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಸಹಕಾರ ಕೊಡುತ್ತಾರೆ ಎನ್ನುತ್ತಾರೆ.
ತೋಟಗಾರಿಕೆಯಲ್ಲಿ ಮಿಶ್ರ ಕೃಷಿಪದ್ದತಿ:
ಅಡಿಕೆ, ತೆಂಗು ಕೃಷಿಕರಾಗಿರುವ ಇವರು ಮಿಶ್ರಕೃಷಿ ಪದ್ದತಿ ಅಳವಡಿಕೆ ಮಾಡಿಕೊಂಡಿದ್ದಾರೆ. ಮೋಹಿತ್ ನಗರ ಅಡಿಕೆ ತಳಿಯ ತೋಟ ಮಾಡಿರುವ ಇವರ ಅಡಿಕೆಯೊಂದಿಗೆ ವೀಳ್ಯದೆಲೆ, ಕಾಳು ಮೆಣಸು ಬೆಳೆಸಿದ್ದಾರೆ. ಜೊತೆಯಲ್ಲಿ ಬಾಳೆ, ಹೊಸ ತೋಟದಲ್ಲಿ ಅಡಿಕೆಯ ನಡುವೆ ಕೆಸು, ಸಾಂಬ್ರಾಣಿ, ಅಲಸಂಡೆಯಂತಹ ತರಕಾರಿಗಳನ್ನು ಹಾಕಿದ್ದಾರೆ. ಗ್ರಾಮೀಣ ಪ್ರದೇಶ ಕೃಷಿಕ ಪುಟ್ಟಯ್ಯ ನಾಯ್ಕರ ಕೃಷಿ ಶೈಲಿ ಅನುಕರಣೀಯ.