ಮಂಜೇಶ್ವರ, ಅ 31(SM): ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಚುನಾವಣೆ ದಾವೆಯನ್ನು ಮುಂದುವರಿಸಲು ದೂರುದಾರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಹೈಕೋರ್ಟ್ ಗೆ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ರವರ ನಿಧನದ ಕುರಿತು ಗಜೆಟ್ ನಲ್ಲಿ ಪ್ರಕಟಿಸುವಂತೆ ಹೈಕೋರ್ಟ್ ಆದೇಶ ನೀಡಿತು.
ಪ್ರತಿವಾದಿಯಾಗಿ ಅಬ್ದುಲ್ ರಜಾಕ್ ರ ಬದಲಿಗೆ ಪ್ರಕರಣ ನಡೆಸಲು ತಯಾರಿದ್ದಾರೆಯೇ ಎಂಬ ಬಗ್ಗೆ ಹೈಕೋರ್ಟ್ ಅಭಿಪ್ರಾಯ ಕೇಳಿತು. 'ಚುನಾವಣೆ ಆದುದರಿಂದ ದಾವೆ ಹಿಂದಕ್ಕೆ ಪಡೆಯಲು ಕಾನೂನಾತ್ಮಕವಾಗಿ ಸಾಧ್ಯವಿಲ್ಲ ಎಂದು ಸುರೇಂದ್ರನ್ ರ ವಕೀಲರು ಹೈಕೋರ್ಟ್ ಮುಂದೆ ವಾದ ಮಂಡಿಸಿದರು. ಅರ್ಜಿಯ ಮುಂದಿನ ವಿಚಾರಣೆ ಡಿಸೆಂಬರ್ ಮೂರಕ್ಕೆ ಮುಂದೂಡಲಾಗಿದೆ. ಶಾಸಕ ನಿಧನರಾದರೆ ಆರು ತಿಂಗಳೊಳಗೆ ಉಪಚುನಾವಣೆ ನಡೆಯಬೇಕಿದೆ. ಆದರೆ ಇದೀಗ ಚುನಾವಣೆ ಆಯ್ಕೆ ಹೈಕೋರ್ಟ್ ನಲ್ಲಿರುವುದರಿಂದ ಉಪ ಚುನಾವಣೆ ಅತಂತ್ರದಲ್ಲಿದೆ.
2016ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿದ್ದ ಪಿ.ಬಿ. ಅಬ್ದುಲ್ ರಝಾಕ್, ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರನ್ನು 89 ಮತಗಳ ಅಂತರದಿಂದ ಪರಾಭವಗೊಳಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಇದೇ ಸಂದರ್ಭ ವಿದೇಶದಲ್ಲಿದ್ದವರು ಮತ್ತು ನಿಧನರಾದವರ ಹೆಸರಲ್ಲಿ ಮತ ಚಲಾವಣೆಯಾಗಿದೆ. ಅಬ್ದುಲ್ ರಜಾಕ್ ನಕಲಿ ಮತದಾನದಿಂದ ಆಯ್ಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಶಾಸಕತ್ವವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಸುರೇಂದ್ರನ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಬಗ್ಗೆ ಬಹುತೇಕ ವಾದ ನಡೆದಿದ್ದು, ಚುನಾವಣೆಯಲ್ಲಿ ನಿಧನರಾದ ಹಾಗೂ ವಿದೇಶದಲ್ಲಿದ್ದವರು ಸಹಿತ 259 ಮಂದಿ ನಕಲಿ ಮತದಾನ ಮಾಡಿರುವ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ 175 ಸಾಕ್ಷಿಗಳ ವಿಚಾರಣೆ ಪೂರ್ಣವಾಗಿದೆ. ಅಲ್ಲದೇ 67 ಮಂದಿಗೆ ಸಮನ್ಸ್ ಕಳುಹಿಸಲಾಗಿದೆ.