ಶಿವಮೊಗ್ಗ, ಅ 31 (MSP): ನಮ್ಮ ಕುಟುಂಬದ ಕಣ್ಣೀರಿನ ಶಾಪದಿಂದಲೇ ಸಿದ್ದರಾಮಯ್ಯ ಪುತ್ರನನ್ನು ಕಳೆದುಕೊಂಡಿದ್ದು ಎನ್ನುವ ಜನಾರ್ದನ ರೆಡ್ಡಿ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರವಾದ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಅವರ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಕ್ಷಮಿಸುವುದು ದೊಡ್ಡ ಗುಣ ಎಂಬ ಹೇಳಿಕೆ ನೀಡಿದ್ದಾರೆ.
'ರೆಡ್ಡಿಗೆ ಸಂಸ್ಕೃತಿ ಇಲ್ಲ ಮನುಷ್ಯತ್ವವೂ ಇಲ್ಲ. ಯಾರಾದರೂ ಅಂಥಾ ಮಾತುಗಳನ್ನು ಆಡುತ್ತಾರಾ, ಸಾರ್ವಜನಿಕ ಜೀವನದಲ್ಲಿ ಇಂಥಹ ಮಾತುಗಳನ್ನು ಒಪ್ಪಿಕೊಳ್ಳುವುದಕ್ಕೆ ಆಗುತ್ತಾದಾ' ಎಂದು ಪ್ರಶ್ನಿಸಿದರು. ಅಲ್ಲದೆ ನನ್ನ ಪುತ್ರನ ಸಾವಿನ ಬಗ್ಗೆ ಮಾತನಾಡಿರುವುದನ್ನು ಸಮಾಜದಲ್ಲಿ ಯಾರಾದಾರೂ ಸಹಿಸಲು ಸಾಧ್ಯವೇ ಎಂದು ಕೇಳಿದ್ದಾರೆ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಸರಿ ಆದರೆ ವೈಯಕ್ತಿಕವಾಗಿ ಕುಟುಂಬದ ವಿಚಾರ ಮಾತನಾಡುವುದು ಸರಿಯಲ್ಲ' ಕ್ಷಮೆ ಕೇಳಿದ್ದಾರೆ ಎಂದಾದರೆ ಕ್ಷಮಿಸುವುದು ದೊಡ್ಡ ಗುಣ ಎಂದಿದ್ದಾರೆ.
ಸಿದ್ದರಾಮಯ್ಯ ಹೇಳಿದ ತಕ್ಷಣವೇ ಯಾರನ್ನಾದರೂ ಜೈಲಿಗೆ ಕಳುಹಿಸಲು ಸಾಧ್ಯವೇ. ಅವರು ಜೈಲಿಗೆ ಹೋಗಿ ಬಂದಿರುವುದು ಅವರ ಮಾಡಿದ ಅಕ್ರಮದ ಫಲವಾಗಿ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ರಿಪಬ್ಲಿಕ್ ಆಫ್ ಬಳ್ಳಾರಿ ಆಗಿದೆ ಎಂಬ ವರದಿ ನೀಡಿದ್ದು ಸತ್ಯವಲ್ಲವೇ 'ಎಂದು ಪ್ರಶ್ನಿಸಿದರು. ಜನಾರ್ದನ ರೆಡ್ಡಿ ಏನು ರಾಜಮನೆತನದಿಂದ ಬಂದವರಾ,? ಅವರ ಮಗಳ ಮದುವೆ ಹೇಗೆ ಮಾಡಿದ್ರು, ದುಡ್ಡು ಎಲ್ಲಿಂದ ಬಂತು? ನನಗೆ 40 ವರ್ಷಗಳಿಂದ ಮೈಸೂರಿನಲ್ಲಿ ಒಂದು ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.