ಬ್ರಹ್ಮಾವರ,ಅ 31 (MSP): ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಯಂಗಡಿ ಎಂಬಲ್ಲಿ 14ನೇ ಶತಮಾನದ್ದು ಎನ್ನಲಾದ ಶಿಲಾ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ವಿದ್ಯಾರ್ಥಿಗಳಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ಸುಭಾಸ್ ನಾಯಕ್ ಬಂಟಕಲ್ಲು ಎಂಬವರು ಪತ್ತೆ ಮಾಡಿದ್ದಾರೆ. ಈ ಪುರಾತನ ಶಾಸನವು ಅಪ್ಪು ಶೇರಿಗಾರ ಎಂಬವರ ಗದ್ದೆಯ ಬದುವಿನಲ್ಲಿ ಹುದುಗಿಹೋಗಿದ್ದು, ಅಲ್ಲಿದ್ದ ಮಣ್ಣನ್ನು ತೆರವುಗೊಳಿಸುವ ಸಂದರ್ಭ ಇದು ಪತ್ತೆಯಾಗಿದ್ದು ಬಳಿಕ ಶಾಸನವನ್ನು ಸ್ವಚ್ಚಗೊಳಿಸಿ, ಅದರ ಪಡಿಯಚ್ಚು ತೆಗೆಯುವುದರ ಮೂಲಕ ಓದಲಾಗಿದೆ.
ಸಾಂದರ್ಭಿಕ ಚಿತ್ರ
ಬಳಪದ ಕಲ್ಲಿನಿಂದ ತಯಾರಿಸಲಾದ ಈ ದಾನ ಶಾಸನದಲ್ಲಿ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ, ಖಡ್ಗ, ಕಾಲುದೀಪ, ಶಿವಲಿಂಗ ಮತ್ತು ನಂದಿಯ ಕೆತ್ತನೆಯನ್ನು ಒಳಗೊಂಡಿದೆ. ನಂತರದಲ್ಲಿ ಶಾಸನದ ಪಾಠವನ್ನು ಕಾಣಬಹುದು. ಶಾಸನದಲ್ಲಿ ಶಕವರುಷ 1312, ಎಂಬ ಮಾಹಿತಿ ಇದ್ದು ಇದನ್ನು ಕ್ರಿಸ್ತ ಶಕೆಗೆ ಪರಿವರ್ತಿಸಿದಾಗ 1390ಕ್ಕೆ ಸರಿ ಹೊಂದುತ್ತದೆ. ಜತೆಗೆ ಅರಸ, ಸ್ಥಳನಾಮ ಹಾಗೂ ದಾನದ ಮಾಹಿತಿಯನ್ನು ಒಳಗೊಂಡಿದೆ.
‘ಶಕವರುಷ 1312ರ ಕಾರ್ತಿಕ ಶುದ್ದ 15 ಗುರುವಾರದಂದು ಅರಿರಾಯ ಗಂಡರ ದಾವಣಿ ವೀರ ಚೆನ್ನರಸ (ಚೆಂನರಸ) ಒಡೆಯರು ಹಾಗೂ ಭಾರದ್ವಾಜ ಗೋತ್ರದ ತಮ್ಮಣ್ಣ (ತಂಮ್ಮಂಣ್ನ) ಸಿನಬಾವರ ಮಗ ಪಾಂಡ್ಯಪ್ಪ ಅರಸರು ಸಿರುವಳಲ (ಶಿರ್ಲಾಲು) ಒಳಗೆ ಬಾರಕೂರ ಹೊರಗಣ ಸೋಮೇಶ್ವರ ದೇವರ ನಂದಾದೀವಿಗೆ ಮೂರು ಕಾಟಿ ಗದ್ಯಾಣವನ್ನು ದಾನ ನೀಡಿರುವ ವಿವರವನ್ನು ಶಾಸನದಲ್ಲಿ ಕಾಣಬಹುದು. ಶಾಸನದಲ್ಲಿ ಉಲ್ಲೇಖಿತವಾಗಿರುವ ಸಿರುವಳಲು ಎಂಬ ಸ್ಥಳವು ಇಂದು ಶಿರ್ಲಾಲು ಆಗಿ ಪರಿವರ್ತನೆ ಆಗಿರಬಹುದೆಂದು’ ಎಂದು ಶ್ರುತೇಶ್ ಆಚಾರ್ಯ ಹಾಗೂ ಸುಭಾಶ್ ನಾಯಕ್ ತಿಳಿಸಿದ್ದಾರೆ. ಶಾಸನ ಪಡಿಯಚ್ಚಿನ ಮೊದಲ ಪ್ರತಿಯನ್ನು ಉಡುಪಿಯ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಸಂರಕ್ಷಣೆಗೆ ನೀಡಲಾಗಿದೆ. ಶಾಸನವು 71 ಸೆ.ಮೀ ಉದ್ದ, 42 ಸೆ.ಮೀ ಅಗಲ ಹಾಗೂ 8 ಸೆ.ಮೀ ದಪ್ಪವಿದೆ. 22 ಸಾಲುಗಳಿರುವ ಶಾಸನವು ಕನ್ನಡ ಮತ್ತು ಸಂಸ್ಕೃತ ಲಿಪಿಯಲ್ಲಿದೆ.