ಉಳ್ಳಾಲ ಅ 12: ಅಕ್ಟೋಬರ್ 4 ರಂದು ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಸಾಮಾಜಿಕ ಕಾರ್ಯಕರ್ತ ಜುಬೈರ್ ಹತ್ಯೆ ಹಾಗೂ ಇಲ್ಯಾಸ್ ಅವರಿಗೆ ಗಂಭೀರ ಹಲ್ಲೆಗೈದ ಪ್ರಕರಣದಲ್ಲಿ ಭಾಗಿಯಾದ ಐವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ತಾವು ಜುಬೈರ್ನನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಉಳ್ಳಾಲದ ತಾಝುದ್ದೀನ್(24), ಸುಹೈಲ್(23), ನಿಜಾಮುದ್ದೀನ್(23)ಅಹಮ್ಮದ್ ಮುಸ್ತಾಫಾ(21) ಮತ್ತು ಆಸೀಫ್(40) ಎಂದು ಗುರುತಿಸಲಾಗಿದೆ. ಕೊಲೆ ಕೃತ್ಯದ ಪ್ರಮುಖ ಸೂತ್ರಧಾರಿ ಅಲ್ತಾಫ್ ತಲೆ ಮರೆಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಜುಬೈರ್ ಅಲ್ತಾಫ್ ವಿರುದ್ಧ ದೂರು ನೀಡಿದ್ದಕ್ಕೆ ಆಕ್ರೋಶಗೊಂಡು ತಾವು ಹತ್ಯೆ ಮಾಡಿರುವುದಾಗಿ ಆರೋಪಿಗಳು ಹೇಳಿದ್ದಾರೆ. 2006ರಲ್ಲಿ ಜುಬೇರ್ ಹಾಗೂ ಆರೋಪಿಗಳ ನಡುವೆ ಹೊಡೆದಾಟ ಸಂಭವಿಸಿತ್ತು. ಬಳಿಕ ರಾಜೀ ಪಂಚಾಯತಿಕೆ ಮಾಡಿ ಪ್ರಕರಣ ಮುಗಿಸಲಾಗಿತ್ತು. ಆದರೆ ಇದೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಒಟ್ಟು ಸೇರಿ ಜುಬೈರ್ನನ್ನು ಅಕ್ಟೋಬರ್ ೪ರಂದು ಮುಕ್ಕಚ್ಚೇರಿ ಸಮೀಪ ತಲ್ವಾರ್ನಿಂದ ಕಡಿದು ಪರಾರಿಯಾಗಿದ್ದರು. ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಆಯುಕ್ತರು ತಿಳಿದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ಪ್ರತ್ಯೇಕ ನಾಲ್ಕು ತಂಡಗಳನ್ನು ರಚಿಸಿದ್ದರು.