ಮಂಗಳೂರು ಆ 30 (DaijiworldNews/MS): ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಅಭಿಪ್ರಾಯಪಟ್ಟರು.
ಅವರು ಆಗಸ್ಟ್ 30ರ ಸೋಮವಾರ ನಗರದ ಬಂಟ್ಸ್ ಹಾಸ್ಟೆಲ್ ರೋಡ್ ನಲ್ಲಿರುವ ತಪೋವನ' ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದ ಚಿಕಿತ್ಸೆ ಉತ್ತಮವಾದ ಚಿಕಿತ್ಸಾ ಪದ್ದತಿಯಾಗಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಆರೋಗ್ಯಕ್ಕೆ ಹಾಗೂ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದರು.
ಬೇರೆ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದ ಆಯುರ್ವೇದಿಕ್ ಚಿಕಿತ್ಸೆ ಜನರಿಗೆ ಈ ಆರೋಗ್ಯ ಕೇಂದ್ರದಲ್ಲಿ ದೊರೆಯಲಿದ್ದು, ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಬೇಕು ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ತಪೋವನ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಹರ್ಷ ಹೆಬ್ಬಾರ್, ಡಾ. ದೇವಿಕೃಪಾ ಹಾಗೂ ಇತರರು ಉಪಸ್ಥಿತರಿದ್ದರು.