ಸುಬ್ರಹ್ಮಣ್ಯ,ಅ 31 (MSP): ಬಿಸಿಲೆ ಘಾಟಿ ರಸ್ತೆ ಮೂಲಕ ತೆರಳುತ್ತಿದ್ದ ಮಹೀಂದ್ರ ಜೀಟೋದ ಮೇಲೆ ಕಾಡಾನೆ ದಾಳಿ ನಡೆಸಿ ಹಾನಿ ಮಾಡಿದ ಘಟನೆ ಅ. 29ರ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ. ವಾಹನದಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಪವಾಡಸದೃಶ್ಯವಾಗಿ ಪಾರಾಗಿ ಬಂದ ಹಮೀದ್ ಮತ್ತು ಅಬ್ದುಲ್ ಸಲಾಂ ಅವರು, ಘಟನೆಯ ಕುರಿತು, ನಾವು ಮತ್ತೇ ಬದುಕಿ ಬರುವ ಆಸೆಯನ್ನೇ ಬಿಟ್ಟಿದ್ದೆವು. ಕುಕ್ಕೆಯ ಸುಬ್ರಹ್ಮಣ್ಯ ಸ್ವಾಮಿ ಮತ್ತು ಗಣಪತಿ ದೇವರೇ ನಮ್ಮನ್ನು ಉಳಿಸಿದ್ದಾರೆ. ಗಣೇಶ ಚತುರ್ಥಿ ಸಂದರ್ಭ ನಮ್ಮೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ನಾವು ವರ್ಷಂಪ್ರತಿ ವಂತಿಗೆ ನೀಡುತ್ತಿದ್ದೆವು. ಅದೇ ಇವತ್ತು ನಮ್ಮನ್ನು ಸಾವಿನ ದವಡೆಯಿಂದ ರಕ್ಷಿಸಿದೆ ಎಂದು ವಿನಮ್ರವಾಗಿ ಹೇಳಿದರು.
ಘಟನೆಯ ವಿವರ
ಅ. 29ರ ಸೋಮವಾರದಂದು ಸೋಮವಾರಪೇಟೆಯ ಮೀನು ವ್ಯಾಪಾರಿಗಳಾದ ಹಮೀದ್ ಮತ್ತು ಅಬ್ದುಲ್ ಸಲೀಂ ಅವರು ಮೀನು ಖರೀದಿ ಮಾಡಲೆಂದು ತಮ್ಮ ಜೀಟೋ ಲಘು ವಾಹನದಲ್ಲಿ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ವಾಹನವನ್ನು ಅಬ್ದುಲ್ ಸಲೀಂ ಅವರು ಚಲಾಯಿಸುತ್ತಿದ್ದರು. ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಗಡಿ ಶ್ರೀ ಚಾಮುಂಡೇಶ್ವರಿ ಗುಡಿಯಿಂದ ಕಲ್ಕುಂದಡೆಗೆ 2 ಕೀ.ಮಿ ಮುಂದಕ್ಕೆ ತಲುಪಿದಾಗ ತಿರುವಿನಲ್ಲಿ ಆನೆ ವಾಹನವನ್ನು ಅಡ್ಡಗಟ್ಟಿತು. ಬಳಿಕ ವಾಹನದ ಗಾಜನ್ನು ಪುಡಿ ಪುಡಿ ಮಾಡಿದ ಅನೆ ವಾಹನದ ಮುಂದಿನ ಭಾಗಕ್ಕೆ ಕಾಲಿನಿಂದ ತುಳಿದು ಹಾನಿ ಮಾಡಿತು. ಬಳಿಕ ಸೊಂಡಿಲನ್ನು ವಾಹನದೊಳಕ್ಕೆ ಹಾಕಿ ಇಬ್ಬರನ್ನು ಹೊರಗೆಳೆದು ದಾಳಿ ಮಾಡಲು ಯತ್ನಿಸಿತು. ಈ ಸಂದರ್ಭ ವಾಹನದೊಳಗಿದ್ದವರು ಭಯದಿಂದ ಬೊಬ್ಬೆ ಹೊಡೆದುದಲ್ಲದೆ ಆನೆಯ ಸೊಂಡಿಲನ್ನು ಕೈಯಿಂದ ತಳ್ಳುವ ಯತ್ನ ನಡೆಸಿದರು. ಇನ್ನೇನು ಆನೆ ಇವರಿಬ್ಬರನ್ನು ಹೊರಗೆಳೆಯಬೇಕು ಎನ್ನುವಾಗ ಆನೆಯ ಜತೆಗೆ ಅಣತಿ ದೂರದಲ್ಲಿದ್ದ ಮರಿಯಾನೆ ಕೂಗಿಕೊಂಡಿತು.
ಈ ವೇಳೆ ತಾಯಿ ಆನೆಯ ಗಮನ ಅತ್ತಹೋಗಿ ವಾಹನವನ್ನು ಬಿಟ್ಟು ಮರಿಯತ್ತ ಸಾಗಿತು. ಬಳಿಕ ಮರಿಯಾನೆಯೊಂದಿಗೆ ಪಕ್ಕದ ಕಾಡಿನಲ್ಲಿ ಮರೆಯಾಯಿತು. ಹೀಗಾಗಿ ಮರಿಯಾನೆಯ ಕೂಗಿನಿಂದ ವಾಹನದಲ್ಲಿದ್ದವರು ಪಾರಾದರು. ಘಟನೆಯಿಂದ ಭಯಭೀತರಾಗಿದ್ದ ಅವರು ಚೇತರಿಸಿಕೊಳ್ಳುತ್ತಿದ್ದಂತೆ ಸುಬ್ರಹ್ಮಣ್ಯ ಪರಿಸರದ ಕಾರು ಅದೇ ದಾರಿಯಾಗಿ ಬಂದಿದ್ದು , ಅದರಲ್ಲಿದ್ದವರು ದಾಳಿಗೀಡಾದ ವಾಹನದಲ್ಲಿದ್ದವರನ್ನು ಮಾತನಾಡಿಸಿ ದೈರ್ಯ ತುಂಬಿದರಲ್ಲದೆ ಅವರನ್ನು ವಾಹನ ಸಹಿತ ತಮ್ಮೊಂದಿಗೆ ಸುಬ್ರಹ್ಮಣ್ಯಕ್ಕೆ ಕರೆದೊಯ್ದರು. ಘಟನೆಯಿಂದ ಭಯಭೀತರಾಗಿದ್ದ ಅವರು ಅಲ್ಲಿ ಮುಂಜಾನೆ ತನಕ ವಿಶ್ರಾಂತಿ ಪಡೆದರು. ಘಟನೆ ನಡೆದ ಸ್ಥಳಕ್ಕೆ ಸುಬ್ರಹ್ಮಣ್ಯ ಅರಣ್ಯ ವಿಭಾಗದ ಅಧಿಕಾರಿಗಳು ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.