ಮಂಗಳೂರು, ಆ 29 (DaijiworldNews/PY): ಹಿರಿಯ ಟ್ರಾಫಿಕ್ ವಾರ್ಡನ್ ಜೋ ಗೊನ್ಸಾಲ್ವಿಸ್ (99) ಅವರು ಭಾನುವಾರ ನಿಧನರಾದರು.
ಜೋ ಗೊನ್ಸಾಲ್ವಿಸ್ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಜನವರಿ 1, 1922ರಂದು ಜನಿಸಿದ್ದ ಗೊಲ್ಸಾಲ್ವಿಸ್ ಅವರು ಅನೇಕರಿಗೆ ಸ್ಪೂರ್ತಿಯಾಗಿದ್ದರು. ತೊಂಭತ್ತರ ದಶಕದಲ್ಲಿಯೂ ಕೂಡಾ ಅವರು ಯುವಕರಂತೆ ಸಾರ್ವಜನಿಕ ಸೇವೆಯನ್ನು ಮುಂದುವರಿಸಿದ್ದರು. ಅವರು 100 ವರ್ಷಗಳನ್ನು ಪೂರೈಸಲು ಕೇವಲ ನಾಲ್ಕು ತಿಂಗಳುಗಳು ಮಾತ್ರವೇ ಬಾಕಿ ಇದ್ದವು.
ಫಳ್ನೀರ್ ನಿವಾಸಿಯಾಗಿರುವ ಜೋ ಗೊಲ್ಸಾಲ್ವಿಸ್ ಅವರು, ಬ್ರಿಟಿಷ್ ಸಂಸ್ಥೆ ಜೆ.ಎಲ್ ಮೋರಿಸನ್ನಲ್ಲಿ ಕೆಲಸ ಮಾಡುತ್ತಿದ್ದು, ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಸೇರ್ಪಡೆಗೊಂಡಿದ್ದರು. ನಂತರ ಅವರು ಕಂಪೆನಿಯ ಕಾರ್ಯನಿರ್ವಾಹಕ ನಿದೇಶಕರಾಗಿ ಸೇವೆ ಸಲ್ಲಿಸಿದ್ದರು. ಲಂಡನ್ನ ಇನ್ಸ್ಟಿಟ್ಯೂಟ್ ಆಫ್ ಮಾರ್ಕೆಟಿಂಗ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಆ ಸಂಸ್ಥೆಯ ಚುನಾಯಿತ ಸದಸ್ಯರೂ ಆಗಿದ್ದರು.
ನಿವೃತ್ತಿಯಾದ ಬಳಿಕ ಜೋ ಗೊಲ್ಸಾಲ್ವಿಸ್ ಅವರು ಶಿಕ್ಷಣ ಸಂಸ್ಥೆಗಳು ಹಾಗೂ ದತ್ತಿ ಸಂಸ್ಥೆಗಳ ನಿರ್ದೇಶಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೇ, ಇವರು ಉತ್ತರ ಅಮೆರಿಕದ ಸೈಂಟ್ ಅಲೋಶಿಯಸ್ ಹಳೆಯ ವಿದ್ಯಾರ್ಥಿಗಳ ಸಂಘದ ಸ್ಥಾಪಕ ನಿರ್ದೇಶಕರಾಗಿದ್ದರು. ಅಪಾರ ಅನುಭವ ಹೊಂದಿರುವ ಇವರು ಮಂಗಳೂರಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಮುಂದಾದರು. ಟ್ರಾಫಿಕ್ ಇಲಾಖೆಯ ನೆರವಿನೊಂದಿಗೆ 2015 ರಲ್ಲಿ 94 ನೇ ವಯಸ್ಸಿನಲ್ಲಿ ಟ್ರಾಫಿಕ್ ವಾರ್ಡನ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಸುರಕ್ಷಿತ ಚಾಲನೆ ಸೇರಿದಂತೆ ಇತರ ಪ್ರಮುಖ ವಿಚಾರಗಳ ಬಗ್ಗೆ ಯುವಜನರೊಂದಿಗೆ ಅವರು ಸಂವಾದ ನಡೆಸುತ್ತಿದ್ದರು. ಅವರ ಸೇವೆ ಹಾಗೂ ಕೊಡುಗೆಗಾಗಿ ಟ್ರಾಫಿಕ್ ವಿಭಾಗ ಅವರನ್ನು ಗೌರವಿಸಿದೆ.
ಜೋ ಗೊಲ್ಸಾಲ್ವಿಸ್ ಯೋಗ ಉತ್ಸಾಹಿಯಾಗಿದ್ದು, ಅನೇಕರಿಗೆ ಮಾದರಿಯಾಗಿದ್ದರು. ಆರೋಗ್ಯಕರ ಜೀವನ ಮುನ್ನಡೆಸಲು ಕಾರ್ಯಕ್ರಮಗಳನ್ನು ನಡೆಸಿದ್ದರು.
ತಮ್ಮ ಜೀವನದ ಕೊನೆಯವರೆಗೂ ಜೋ ಗೊಲ್ಸಾಲ್ವಿಸ್ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು.