ಉಡುಪಿ, ಅ 30(SM): ಉಡುಪಿ ಶಾಸಕ ರಘುಪತಿ ಭಟ್ ಅವರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ ಶಾಸಕರು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮರಳುಗಾರಿಕೆ ಆರಂಭಿಸಬೇಕೆಂದು ಧರಣಿ ನಡೆಸುತ್ತಿರುವುದು ತಪ್ಪು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಕುಂದಾಪುರದ ತ್ರಾಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲಾಧಿಕಾರಿ ಈ ವಿಚಾರದಲ್ಲಿ ಅಮಾಯಕರಾಗಿದ್ದಾರೆ. ಅವರು ಕಾನೂನು ಮತ್ತು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದ್ದಾರೆ. ಕೇಂದ್ರ ಸರಕಾರದ ಕೆಲ ನಿಯಮಗಳಿಂದ ಮರಳಿನ ಸಮಸ್ಯೆ ಉಂಟಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಸಾಂಪ್ರದಾಯಿಕ ಮರಳುಗಾರಿಕೆ ಮಾಡುವ 93 ಮಂದಿಗೆ ಮರಳು ತೆಗೆಯಲು ಅವಕಾಶ ನೀಡಲು ಸರಕಾರ ಒಪ್ಪಿದೆ. ಆದರೆ ಬಿಜೆಪಿಯವರು 171 ಮಂದಿಗೆ ಪರವಾನಿಗೆ ನೀಡಬೇಕೆಂದು ಪಟ್ಟು ಹಿಡಿದಿರುವುದು ಮರಳಿನ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಇದು ಕಾನೂನು ಉಲ್ಲಂಘನೆಯಾಗುತ್ತದೆ ಎಂದರು.
ಹಿಂದೆ ಶ್ರೀಮಂತರಿಗೆ ಮರಳು ಹೋಗುತ್ತಿತ್ತು ಅದಕ್ಕೆ ಕಡಿವಾಣ ಹಾಕಲು ಸರಕಾರ ಕೆಲವೊಂದು ನೀತಿ ನಿಯಮಗಳನ್ನು ಜಾರಿಗೊಳಿಸಿದೆ. ಬಡ ಜನರ ಮನೆ ನಿರ್ಮಾಣಕ್ಕೆ ಮರಳು ಸಿಗಬೇಕು. ಅದಕ್ಕೆ ರಾಜ್ಯ ಸರಕಾರದ ಮೊದಲ ಆದ್ಯತೆ ಎಂದು ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.