ಬಿ.ಸಿ.ರೋಡು, ಅ 30(SM): ಬಿಸಿರೋಡಿನಲ್ಲಿ ಕಾಂಕ್ರೀಟಿಕೃತ ಸರ್ವೀಸ್ ರಸ್ತೆಯನ್ನು ಅಗೆದು ಹಾಕಿ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡಿದ ಕುಡಿಯುವ ನೀರಿನ ಯೋಜನೆಯ ಅಧಿಕಾರಿಗಳನ್ನು ಶಾಸಕ ರಾಜೇಶ್ ನಾಯಕ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಅಲ್ಲದೆ ನಾಳೆಯೊಳಗೆ ಮರು ಕಾಂಕ್ರೀಟಿಕರಣ ವ್ಯವಸ್ಥೆ ಮಾಡಿ ಜನರಿಗೆ ತೊಂದರೆ ಕೊಡಬೇಡಿ ಎಂದು ವಾರ್ನಿಂಗ್ ನೀಡಿದ್ದಾರೆ. ಪುರಸಭಾ ವ್ಯಾಪ್ತಿಯ ಬಿಸಿರೋಡಿನ ವಿವೇಕನಗರದ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ನೀರು ಪೋಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪುರಸಭಾ ಇಲಾಖೆಯ ಕುಡಿಯುವ ನೀರು ಸರಬರಾಜು ಮಂಡಳಿಯ ವತಿಯಿಂದ ಇತ್ತೀಚೆಗೆ ಕಾಂಕ್ರೀಟ್ ಮಾಡಿದ ಸರ್ವೀಸ್ ರಸ್ತೆಯನ್ನು ಅರ್ಧ ಅಗೆದು ಹಾಕಲಾಗಿದೆ.
ಅದರೂ ನೀರಿನ ಪೈಪ್ ಸರಿ ಮಾಡುವ ಕೆಲಸ ಮಾತ್ರ ಪೂರ್ಣಗೊಂಡಿಲ್ಲ. ಇದರಿಂದ ಬೆಳಿಗ್ಗೆಯಿಂದಲೇ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪುರಸಭಾ ಇಂಜಿನಿಯರ್ ಹಾಗೂ ಕುಡಿಯುವ ನೀರಿನ ಯೋಜನೆಯ ಅಧಿಕಾರಿಗಳಿಗೆ ತುರ್ತಾಗಿ ಕೆಲಸ ಮಾಡಿ ಮುಗಿಸುವಂತೆ ಸೂಚನೆ ನೀಡಿದರು.