ಉಡುಪಿ,ಅ 30 (MSP): ಕರಾವಳಿ ಜನ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಅ. 30 ರ ಮಂಗಳವಾರ ಉಡುಪಿಯ ತ್ರಾಸಿಯಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಕರಾವಳಿ ಜನ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ. ದಯವಿಟ್ಟು ಹಿಂದೂ- ಮುಸಲ್ಮಾನರು ಸಂಘರ್ಷಕ್ಕೆ ಒಳಗಾಗಬೇಡಿ ಎಂದು ಕರೆ ನೀಡಿದ್ದಾರೆ.
ನಾವು ಬಿಜೆಪಿಗಿಂತ ಒಳ್ಳೆಯ ಹಿಂದುತ್ವ ಪಾಲಿಸುತ್ತಿದ್ದು, ಹಿಂದುತ್ವದಲ್ಲಿ ನಾವು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ನಾವಿದ್ದೇವೆ. ಭಾರತೀಯ ಜನತಾ ಪಾರ್ಟಿ ಮತಕ್ಕಾಗಿ ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡುತ್ತಾ ಚುನಾವಣೆ ನಡೆಸುತ್ತಾ ಬಂದಿದೆ ಎಂದು ಇದೇ ವೇಳೆ ಆರೋಪಿಸಿದರು.
ಸಮ್ಮಿಶ್ರ ಸರ್ಕಾರ ಪತನವಾಗುವ ಕನಸು ಕಾಣುತ್ತಾ ಬಿಜೆಪಿ ನಾಯಕರು ಕಾಲ ಕಳೆಯುತ್ತಿದ್ದಾರೆ. ಆದರೆ ನಮಗೆ ದೈವ ಪ್ರೇರೇಪಣೆ ಇದ್ದು ನಾವು ಎಷ್ಟು ದಿನ ಅಧಿಕಾರದಲ್ಲಿರಬೇಕೆಂದು ದೇವರು ತೀರ್ಮಾನಿದ್ದಾರೆ ಎಂದರು. ರಾಜ್ಯ ಸರ್ಕಾರಕ್ಕೆ ಸುಭದ್ರವಾಗಿದೆ ಉಪಚುನಾವಣೆ ನಂತರ ನಾನು ಮನೆಗೆ ಹೋಗಲ್ಲ. ಯಡಿಯೂರಪ್ಪ ಹೇಳಿದಂತೆ ಯಾವುದೂ ಆಗಲ್ಲ ಎಂದು ಸ್ಪಷ್ಟಪಡಿಸಿದರು. ನಾನು ನನ್ನ ಮನೆಗೆ ಹೋಗದೆ ರಾಜ್ಯದ ಬಡವರ ಮನೆಗೆ ಹೋಗುತ್ತೇನೆ. ಅದೇ ಮನೆಯಲ್ಲಿ ಕುಳಿತು ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡ್ತೇನೆ. ವಿಪಕ್ಷದ ಆರೋಪದಂತೆ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಬದಲಾಗಿ ಸರ್ಕಾರದ ಖಜಾನೆಯಲ್ಲಿ ಸಾಕಷ್ಟು ಹಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಮಗನ ಸಾವಿಗೆ ನಮ್ಮ ಕುಟುಂಬದ ಕಣ್ಣೀರು ಕಾರಣ ಎಂಬ ಜನಾರ್ದನ ರೆಡ್ಡಿ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಜನಾರ್ದನ ರೆಡ್ಡಿ ವೈಯಕ್ತಿಕ ವಿಚಾರ ಮಾತನಾಡಿದ್ದಾರೆ. ಇದು ಬಿಜೆಪಿಯ ಸಣ್ಣತನ ತೋರಿಸುತ್ತದೆ. ನಾನು ವೈಯಕ್ತಿಕ ವಿಚಾರಗಳ ಮೇಲೆ ಒಬ್ಬ ವ್ಯಕ್ತಿ ಮೇಲೆ ದಾಳಿ ಮಾಡುವಷ್ಟು ಸಣ್ಣವನಲ್ಲ. ಇದು ಜನಾರ್ದನ ರೆಡ್ಡಿಯ ಕೀಳು ಅಭಿರುಚಿ ತೋರಿಸುತ್ತದೆ ಎಂದು ಹೇಳಿದರು.