ಶಿವಮೊಗ್ಗ,ಅ 30 (MSP): ಹೋಟೇಲ್ ನಲ್ಲಿ ಕೆಲಸಕ್ಕಿದ್ದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ತೆಂಗಿನಕಾಯಿ ತುರಿಯುವ ಯಂತ್ರಕ್ಕೆ ಸಿಲುಕಿ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಗಾಂಧಿನಗರದ ಚಾಮುಂಡೇಶ್ವರಿ ಮಿಲ್ಟ್ರೀ ಹೋಟೆಲ್ನಲ್ಲಿ ಅ. 27 ರ ಭಾನುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ಬಾಲಕನನ್ನು ಶಿವಮೊಗ್ಗದ ಕುಂಸಿ ಮೂಲದ ರೂಪೇಶ್ (17) ಎಂದು ಗುರುತಿಸಲಾಗಿದೆ. ಬಾಲಕ ಸಾವನಪ್ಪಿದ ಘಟನೆಗೆ ಸಂಬಂಧಪಟ್ಟಂತೆ, ಅಪ್ರಾಪ್ತ ಬಾಲಕನನ್ನು ಕೆಲಸಕ್ಕೆ ಸೇರಿಸಿಕೊಂಡ ಆರೋಪ ಹಾಗೂ ನಿರ್ಲಕ್ಷ್ಯದ ಆರೋಪದ ಮೇಲೆ ಹೋಟೆಲ್ ನ ಮಾಲಕ ಮಂಜುನಾಥ್ ಮತ್ತು ಮ್ಯಾನೇಜರ್ ಲೋಕೇಶ್ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಕುಂಸಿ ಮೂಲದವರಾಗಿರುವ ರೂಪೇಶ್, ಒಂದು ತಿಂಗಳ ಹಿಂದೆಯೇ ಮನೆಯವರನ್ನು ತೊರೆದು ಬಂದು ಈ ಹೊಟೇಲ್ ನಲ್ಲಿ ಏಳು ಸಾವಿರ ಸಂಬಳಕ್ಕೆ ದುಡಿಯಲು ಒಪ್ಪಿಕೊಂಡಿದ್ದ. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಭಾನುವಾರದಂದು ರಾತ್ರಿ ರೂಪೇಶ್ ತೆಂಗಿನಕಾಯಿ ತುರಿಯುವಾಗ ಸಂದರ್ಭದಲ್ಲಿ ಈತನ ಬಟ್ಟೆ ಯಂತ್ರಕ್ಕೆ ಸಿಕ್ಕಿ ಹಾಕಿಕೊಂಡು, ಜೋರಾಗಿ ಕಿರುಚಾಡಿದ್ದಾನೆ. ಶಬ್ದ ಕೇಳಿ ಇತರೆ ಹೋಟೆಲ್ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ರೂಪೇಶ್ ಯಂತ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದ ಎಂದು ಪೊಲೀಸರು ಹೇಳಿದರು.