ಲಕ್ನೋ, ಅ 30 (MSP): ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ ಎನ್ನುವ ಪೇದೆ ತಂದೆಗೆ ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣವಾಗಿತ್ತು. ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಅಧಿಕಾರ ವಹಿಸಿಕೊಂಡು ಕಚೇರಿಗೆ ಆಗಮಿಸಿದ ಮಗನಿಗೆ ಆ ಪೇದೆ ತಂದೆ ಎದ್ದು ನಿಂತು ಹೆಮ್ಮೆಯಿಂದ ಸಲ್ಯೂಟ್ ಹೊಡೆದಾಗ ಅಲ್ಲಿ ಸೇರಿದ್ದವರ ಹೃದಯ ತುಂಬಿ ಬಂತು.
ಲಕ್ನೋದ ಉತ್ತರ ವಿಭಾಗದ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ಪಿ) ಆಗಿ ಯುವ ಐಪಿಎಸ್ ಅಧಿಕಾರಿ ಅನೂಪ್ ಸಿಂಗ್ ಸೋಮವಾರ ಅಧಿಕಾರ ಸ್ವೀಕರಿಸಿಕೊಂಡರು. ವಿಶೇಷ ಅಂದರೆ ಅವರು ಕರ್ತವ್ಯಕ್ಕೆ ನಿಯೋಜನೆಗೊಂಡ ವಿಭಾಗದ ವಿಭೂತಿ ಖಂಡ ಠಾಣೆಯಲ್ಲಯೇ ಅವರ ತಂದೆ ಜನಾರ್ದನ್ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಧಿಕಾರ ಸ್ವೀಕರಿಸಿ ಕಚೇರಿಯೊಳಕ್ಕೆ ನಡೆದು ಬಂದ ಎಸ್ಪಿ ಯಾದ ಮಗನಿಗೆ ಗೇಟಿನಲ್ಲಿ ನಿಂತ ಪೇದೆ ತಂದೆ ಸಲ್ಯೂಟ್ ಮಾಡಿ ಹೆಮ್ಮೆಪಟ್ಟರು. ಬಳಿಕ ಮಾತನಾಡಿದ ತಂದೆ ಜನಾರ್ದನ್ ತಂದೆಯಾಗಿ ನನಗೆ ಇದೊಂದು ಅವಿಸ್ಮರಣೀಯ ಘಳಿಗೆ. ಮಗ ನನಗೆ ಹಿರಿಯ ಅಧಿಕಾರಿಯಾಗಿರುವುದು ನನಗೆ ದೊರಕಿದ ಗೌರವ. ಎಲ್ಲಾ ಅಧಿಕಾರಿಗಳು ಎದುರಾದಾಗ ಸೆಲ್ಯೂಟ್ ಮಾಡುವಂತೆ ಆತನಿಗೂ ಸೆಲ್ಯೂಟ್ ಮಾಡುತ್ತೇನೆ ಎಂದಿದ್ದಾರೆ.
ಇನ್ನು ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಮೊದಲ ಅಧಿಕಾರಿಗಳ ಸಭೆ ನಡೆಸುವುದಕ್ಕೂ ಮುಂಚೆ, ಅನೂಪ್ ತಂದೆಯ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದರು. ತನ್ನನ್ನೊಬ್ಬ ಪೊಲೀಸ್ ಅಧಿಕಾರಿಯನ್ನಾಗಿಸಲು ಬಡತನದ ನಡುವೆಯೂ ಬಹಳಷ್ಟು ಶ್ರಮಿಸಿದ ಅಪ್ಪನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ತಮ್ಮ ವೃತ್ತಿಗೆ ಅಪ್ಪ-ಮಗನ ಸಂಬಂಧ ಯಾವುದೇ ರೀತಿಯಲ್ಲಿ ತೊಡಕಾಗದು ಎಂದು ಸ್ಪಷ್ಟಪಡಿಸಿದ್ದಾರೆ.