ಸುಬ್ರಹ್ಮಣ್ಯ, ಅ 11: ಹಿಂದೂ ಜಾಗರಣಾ ವೇದಿಕೆ ಮತ್ತು ವಿಶ್ವಹಿಂದು ಪರಿಷತ್ ಮಂಗಳೂರು ವಿಭಾಗದ ಆಶ್ರಯದಲ್ಲಿ ಸುಬ್ರಹ್ಮಣ್ಯದ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಸುಬ್ರಹ್ಮಣ್ಯ ಘಟಕ ಮತ್ತು ಬಜರಂಗ ದಳ ಸುಬ್ರಹ್ಮಣ್ಯ ಘಟಕದ ವತಿಯಿಂದ ಕರಾವಳಿ ಸೇರಿದಂತೆ ರಾಜ್ಯದ ಕೆಲವೆಡೆ ನಡೆಯುತ್ತಿರುವ ಹಿಂದು ನಾಯಕರ ಮೇಲಿನ ದೌರ್ಜನ್ಯ ಖಂಡಿಸಿ ಸುಬ್ರಹ್ಮಣ್ಯದಲ್ಲಿ ಬುಧವಾರ ಜಾಥಾ ಹಾಗೂ ಪ್ರತಿಭಟನಾ ಸಭೆ ನಡೆಯಿತು. ಕಾಶಿಕಟ್ಟೆಯಿಂದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ರಥಬೀದಿ ತನಕ ಕಾರ್ಯಕರ್ತರು ಪ್ರತಿಭಟನಾ ಜಾಥಾ ನಡೆಸಿ ಆ ಬಳಿಕ ಸಭೆ ನಡೆಸಿದರು.
ಕರಾವಳಿ ಜಿಲ್ಲೆಯಲ್ಲಿ ಮೂಲಭೂತವಾದಿ ಶಕ್ತಿಗಳ ದಾಳಿಗೆ ಸಿಲುಕಿ ಅಮಾಯಕ ಹಿಂದುಗಳ ಹತ್ಯೆ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಹಾಗಿದ್ದರೂ ಇದರ ವಿರುದ್ದ ರಾಜ್ಯ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ. ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆದ ದಬ್ಬಾಳಿಕೆ, ದೌರ್ಜನ್ಯ ಮತ್ತು ಕಿರುಕುಳ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳಬೇಕು.ಹಿಂದೂ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ಹತ್ತಿಕ್ಕುವ ರಾಜ್ಯ ಸರಕಾರದ ಕೆಲವು ಅಧಿಕಾರಿಗಳ ಅತಿರೇಕದ ವರ್ತನೆ ವಿರುದ್ದ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ಸಭೆಯಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ಹಿಂದೂ ಜಾಗರಣ ವೇದಿಕೆ ಮುಖಂಡ ಕೌಶಿಕ್ ಕೊಡಪಾಲ ಹೇಳಿದರು.
ಪ್ರತಿಭಟನೆಯ ಬಳಿಕ ನೂರಾರು ಕಾರ್ಯಕರ್ತರು ಜಾಥಾದಲ್ಲಿ ತೆರಳಿ ಗ್ರಾ.ಪಂ. ಕಾರ್ಯದರ್ಶಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.