ಕಾಸರಗೋಡು, ಆ 26 (DaijiworldNews/PY): ಐದು ತಿಂಗಳ ಹಿಂದೆ ಕೊರೊನಾ ನಿರೀಕ್ಷಣಾ ಕೇಂದ್ರದಿಂದ ಪರಾರಿಯಾಗಿದ್ದ ಆರೋಪಿಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮೂಲಡ್ಕದ ನೌಶದ್ ಶೇಕ್ (36) ಪರಾರಿಯಾಗಿದ್ದ ಆರೋಪಿ. ಮಾದಕ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿತ್ತು. ಗುರುವಾರ ಬೆಳಿಗ್ಗೆ ಕಾಸರಗೋಡು ರೈಲು ನಿಲ್ದಾಣ ಪರಿಸರದಿಂದ ಈತನನ್ನು ಬಂಧಿಸಲಾಗಿದೆ.
ಮಾ.27ರಂದು ಮಾದಕ ವಸ್ತು ಸಹಿತ ಅಂಬಲತ್ತರದಿಂದ ಈತನನ್ನು ಬಂಧಿಸಲಾಗಿತ್ತು. ತಪಾಸಣೆಯಲ್ಲಿ ಸಂದರ್ಭ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಈತನನ್ನು ಕಾಞ೦ಗಾಡ್ನ ಕೊರೊನಾ ನಿರೀಕ್ಷಣಾ ಕೇಂದ್ರಕ್ಕೆ ಸೇರಿಸಲಾಗಿತ್ತು. ನಾಲ್ಕು ದಿನಗಳ ಬಳಿಕ ಈತ ಕೇಂದ್ರದಿಂದ ಪರಾರಿಯಾಗಿದ್ದನು.
ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಈ ನಡುವೆ ಈತ ತಳಂಗರೆಯಲ್ಲಿರುವ ಸ್ನೇಹಿತನನನ್ನು ಭೇಟಿ ಮಾಡಲು ತಲುಪಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಇದರಿಂದ ಬೆಳಿಗ್ಗೆಯಿಂದ ಪೊಲೀಸರು ನಿಗಾ ಇರಿಸಿದ್ದರು. ಸ್ಕೂಟರ್ನಲ್ಲಿ ತೆರಳುತ್ತಿದ್ದ ನೌಶಾದ್ ಅನ್ನು ಪೊಲೀಸರು ವಶಕ್ಕೆ ಪಡೆಯಲೆತ್ನಿಸಿದರೂ ಪರಾರಿಯಾಗಲೆತ್ನಿಸಿದ್ದು, ಬೆನ್ನಟ್ಟಿದ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.