ನವದೆಹಲಿ,ಅ 30 (MSP): ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟರ್ ಶೋಯಬ್ ಮಲಿಕ್ ಈ ದಂಪತಿಗಳಿಬ್ಬರು, ಅಪ್ಪ ಅಮ್ಮನಾದ ಖುಷಿಯಲ್ಲಿದ್ದಾರೆ. ಅ.30 ರ ಮಂಗಳವಾರ ಈ ವಿಚಾರವನ್ನು ಖುದ್ದು ಶೋಯಬ್ ಮಲಿಕ್ ಅವರು ಟ್ವೀಟ್ ಮಾಡಿ , ನಮಗೆ ಮುದ್ದಾದ ಗಂಡು ಮಗು ಜನಿಸಿದೆ. ಸಾನಿಯಾ ಮತ್ತು ಮಗು ಆರೋಗ್ಯವಾಗಿದ್ದಾರೆ' ಎಂದು ತಿಳಿಸಿದ್ದಾರೆ.
ಈ ಹಿಂದೆಯೇ ಸಾನಿಯಾ ಮಿರ್ಜಾ ಅವರು ತಾವು ಗರ್ಭಿಣಿಯಾಗಿರುವ ಸುಳಿವನ್ನು ಟ್ವೀಟರ್ ನಲ್ಲಿ ಪ್ರಕಟಿಸಿ ಮಗುವಿನ ಸರ್ ನೇಮ್ ಮಿರ್ಜಾ ಮಲಿಕ್ ಇರಲಿದೆ ಎಂದಿದ್ದರು. ಇದಲ್ಲದೆ ಗರ್ಭಿಣಿಯಾಗಿರುವ ತಮ್ಮ ವಿವಿಧ ಹಂತಗಳ ಚಿತ್ರಗಳನ್ನು ಹಾಗೂ ಸೀಮಂತದ ಪೋಟೋಗಳನ್ನು ಹಂಚಿಕೊಂಡಿದ್ದರು.
ಸಾಮಾನ್ಯವಾಗಿ ಮಗುವಿನ ಹೆಸರಿನೊಂದಿಗೆ ತಂದೆಯ ಸರ್ನೇಮ್ ಇರುವುದು ಸಂಪ್ರದಾಯ ಆದರೆ ಇದಕ್ಕೆ ವಿರುದ್ಧವಾಗಿ ನಮ್ಮ ಮಗು ತಾಯಿ-ತಂದೆ ಇಬ್ಬರ ಹೆಸರನ್ನೂ ಒಳಗೊಂಡಿರುತ್ತದೆ ಎಂದು ಸಾನಿಯಾ ಈ ಹಿಂದೆಯೇ ಗುಟ್ಟು ಬಿಟ್ಟುಕೊಟ್ಟಿದ್ದರು. ಮಗುವಿನ ಸರ್ನೇಮ್ ಅನ್ನು ಕೇವಲ ಮಲಿಕ್ ಎಂದು ಇರಿಸದೆ ’ಮಿರ್ಜಾ ಮಲಿಕ್” ಎಂದು ಇರಿಸುವುದಾಗಿ ಸ್ಪಷ್ಟಪಡಿಸಿದ್ದರು. ಇದಲ್ಲದೆ ಸಾನಿಯಾ ಕೂಡ ವಿವಾಹದ ನಂತರ ತಮ್ಮ ಹೆಸರನ್ನು ಬದಲಿಸಿರಲಿಲ್ಲ. ತಮ್ಮ ತಂದೆಯಿಂದ ಬಂದ ಮಿರ್ಜಾ ಹೆಸರನ್ನೇ ಅವರು ಉಳಿಸಿಕೊಂಡಿದ್ದರು.