ಮಂಗಳೂರು,ಆ 25 (DaijiworldNews/MS): ಬಂದರಿನ 132 ವರ್ಷ ಹಳೆಯ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯೂ ನವೀಕರಣಗೊಂಡು ಹೊಸ ರೂಪ ಪಡೆದು ಸಾರ್ವಜನಿಕ ಸೇವೆಗೆ ಸಜ್ಜಾಗಿದೆ. ಬಂದರು ಠಾಣೆ ಶತಮಾನದ ಇತಿಹಾಸ ಹೊಂದಿರುವ ಪುರಾತನ ಕಟ್ಟಡವಾಗಿದ್ದು, ಕಣ್ಮನ ಸೆಳೆಯುವ ವಿನ್ಯಾಸವನ್ನು ಹೊಂದಿದೆ. ಮಂಗಳೂರು ನಗರದ ಹೆಮ್ಮೆಯಾಗಿರುವ ಪಾರಂಪರಿಕ ಕಟ್ಟಡವನ್ನು 2019 ರಿಂದ 2021 ರವರೆಗೆ ಅಧಿಕಾರದಲ್ಲಿದ್ದ ಅಂದಿನ ಇನ್ಸ್ಪೆಕ್ಟರ್ ಗೋವಿಂದ್ ರಾಜು ಅವರ ನೇತೃತ್ವದಲ್ಲಿ ನವೀಕರಿಸಲಾಗಿದೆ .
ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದನ್ನು ಗಮನಿಸಿದ ಅಂದಿನ ಇನ್ಸ್ಪೆಕ್ಟರ್ ಗೋವಿಂದ್ ರಾಜು ಕಟ್ಟಡವನ್ನು ನವೀಕರಿಸಲು ಆಸಕ್ತಿ ತೋರಿ ಸ್ಥಳೀಯರಿಂದ ಸಹಾಯ ಪಡೆದು ಕಟ್ಟಡವನ್ನು ರೂಫ್, ಫ್ಲೋರ್, ಪೇಂಟ್, ಎಲೆಕ್ಟ್ರಿಕ್ ವರ್ಕ್, ಪಾರ್ಕಿಂಗ್ ಶೆಡ್, ಫ್ಲ್ಯಾಗ್ ಪೋಸ್ಟ್ ಸುಮಾರು 7 ರಿಂದ 8 ಲಕ್ಷ ವೆಚ್ಚದಲ್ಲಿ ನವೀಕರಿಸಿದರು.
ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು ಬಂದರು ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ಠಾಣೆಯ ಕಟ್ಟಡದ ಇತಿಹಾಸದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. " 1889 ರಲ್ಲಿ 0.67 ಎಕರೆ ಪ್ರದೇಶದಲ್ಲಿ 1600 ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈವರೆಗೆ ಸಾವಿರಾರು ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪೊಲೀಸ್ ಠಾಣೆಯೂ 2 ಮಹಡಿಗಳನ್ನು ಹೊಂದಿದ್ದು , ಮಂಗಳೂರು ಹೆಂಚಿನ ಮೇಲ್ಛಾವಣಿಯೊಂದಿಗೆ 10ಕ್ಕೂ ಅಧಿಕ ಕೊಠಡಿಗಳನ್ನು ಹೊಂದಿದೆ. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲೇ ನಿರ್ಮಾಣವಾಗಿದ್ದು ಕಟ್ಟಡವು ಗಟ್ಟಿಮುಟ್ಟಾಗಿದ್ದು, ಹಳೆಯ ವಾಸ್ತುಶಿಲ್ಪದೊಂದಿಗೆ ಪಾರಂಪರಿಕ ಸ್ಪರ್ಶವನ್ನು ಉಳಿಸಿಕೊಂಡಿದೆ. ಕಟ್ಟಡದ ಮೇಲ್ಛಾವಣಿ, ಬಾಗಿಲುಗಳು ಮರಮಟ್ಟುಗಳಿಂದ ಕೂಡಿದ್ದು, ಪುರಾತನ ಸರಕಾರಿ ಕಟ್ಟಡದ ಶೈಲಿಯನ್ನು ಹೊಂದಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.