ಮುಂಬೈ, ಅ 29(SM): ಮುಂಬೈಯಲ್ಲಿ ನಡೆದ 4ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಂಟ್ ಮಾಡಿದ ಟೀಂ ಇಂಡೀಯಾ, ರೋಹಿತ್ ಶರ್ಮಾ ಹಾಗೂ ಅಂಬಾಟಿ ರಾಯುಡು ಅವರ ಭರ್ಜರಿ ಶತಕಗಳ ನೆರವಿನಿಂದ ಮುನ್ನೂರರ ಗಡಿದಾಟಿತು. ಅಂತಿಮವಾಗಿ 50 ಓವರ್ ಗಳಲ್ಲಿ 5 ವಿಕೆಟ್ ಕಳೆದು 377 ರನ್ ಪೇರಿಸಿ, ವಿಂಡೀಸ್ ಗೆ 378 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿತು. ಭಾರತದ ಪರ ರೋಹಿತ್ ಶರ್ಮಾ 162, ಅಂಬಾಟಿ ರಾಯುಡು 100, ಧವನ್ 38, ವಿರಾಟ್ 16, ಎಂ.ಎಸ್. ಧೋನಿ 23, ಕೇದರ್ ಜಾದವ್ 16 ರನ್ ಗಳನ್ನು ಸಿಡಿಸುವ ಮೂಲಕ ತಂಡ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.
ಭಾರತ ನೀಡಿದ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ಗೆ ಆರಂಭದಲ್ಲೇ ಆಘಾತ ಎದುರಾಯಿತು. ವಿಂಡೀಸ್ ನ ಆರಂಭಿಕರು ಬಂದಷ್ಟು ವೇಗದಲ್ಲೇ ಫವೀಲಿಯನ್ ಗೆ ಮರಳಿದರು.
ವೆಸ್ಟ್ ಇಂಡೀಸ್ 11.3 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದು 47 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಜೆಸನ್ ಹೋಲ್ಡರ್ ಅವರ ಅರ್ಧ ಶತಕದ ನೆರವಿನಿಂದಾಗಿ ವೆಸ್ಟ್ ಇಂಡೀಸ್ ಮೊತ್ತ ಮೂರಂಕಿಯನ್ನು ದಾಟಲು ಸಾಧ್ಯವಾಯಿತು. ಅಂತಿಮವಾಗಿ 36.2 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 153 ರನ್ ಪೇರಿಸಲಷ್ಟೇ ಶಕ್ತವಾಗಿ ಭಾರತಕ್ಕೆ ಶರಣಾಯಿತು. ವಿಂಡೀಸ್ ಪರ ಹೋಲ್ಡರ್ ಅವರ 54 ರನ್ ಕಾಣಿಕೆ ಹೊರತು ಪಡಿಸಿದರೆ ಯಾವೊಬ್ಬ ಆಟಗಾರ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ಟೀಂ ಇಂಡಿಯಾ ಪರ ಜಸ್ಪ್ರಿತ್ ಬೂಮ್ರಾ ಹಾಗೂ ಕುಲದೀಪ್ ಯಾದವ್ ತಲಾ 3 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.