ಬಂಟ್ವಾಳ, ಆ. 24(DaijiworldNews/HR): ದೇಶದ 60-70 ಶೇ. ಮಂದಿ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದು, ಕೃಷಿ ಬೆಳೆದಾಗ ಮಾತ್ರ ದೇಶ ಬೆಳೆಯಲು ಸಾಧ್ಯ. ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳಲ್ಲಿ ಬದಲಾವಣೆ ತಂದಿದ್ದು, ರೈತರ ಕಮಿಷನ್ನಲ್ಲಿ ಆದಾಯ ಪಡೆಯುವವರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಈ ಕುರಿತು ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಬಂಟ್ವಾಳ ಬಿಜೆಪಿ ರೈತ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, "ರೈತರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ರೈತರ ಮನೆಗಳಲ್ಲೇ ಮೋರ್ಚಾದ ಸಭೆಗಳನ್ನು ಸಂಘಟಿಸುವ ಕೆಲಸ ಮಾಡಿ. ನಾವು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಪ್ರಧಾನಿಗಳ ಬಲಿಷ್ಠ ಭಾರತ ನಿರ್ಮಾಣದ ಕನಸು ನನಸಾಗುತ್ತದೆ" ಎಂದರು.
ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಅಣ್ಣಳಿಕೆ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಉಪಾಧ್ಯಕ್ಷ ಚಿದಾನಂದ, ಪಕ್ಷದ ಮುಂದಾಳು ಮಾಧವ ಮಾವೆ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಮಜಲು, ಬಂಟ್ವಾಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಸಜೀಪ ಮೊದಲಾದವರು ಉಪಸ್ಥಿತರಿದ್ದರು.