ಬೆಳ್ತಂಗಡಿ, ಅ 29(SM): ಹಣವನ್ನು ಯೋಗ್ಯವಾಗಿ ಬಳಸುವುದು ಹೇಗೆಂಬ ಮಹತ್ತರವಾದ ಸಂಸ್ಕಾರ, ತರಬೇತಿಯನ್ನು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸ್ವಸಹಾಯ ಗುಂಪುಗಳ ಮೂಲಕ ಜನತೆಗೆ ಹೇಳಿಕೊಡುತ್ತಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಐಸಿ ಸಹಭಾಗಿತ್ವದಲ್ಲಿ ನೂತನವಾಗಿ ಅನುಷ್ಠಾನಗೊಳ್ಳಲ್ಲಿರುವ ಪ್ರಗತಿ ರಕ್ಷಾ ಕವಚ ವಿಮಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಹೆಗ್ಗಡೆಯವರು ಇಲ್ಲಿನ ಆಧ್ಯಾತ್ಮಿಕವಾದ ಶಕ್ತಿಯನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸಿ ಅವರ ಉನ್ನತಿಗೆ ಶ್ರಮಿಸುತ್ತಿರುವುದು ದೇಶಕ್ಕೆ ಮಾದರಿಯಾಗಿದೆ. ವ್ಯಕ್ತಿಯ ಪುರುಷಾರ್ಥವಿರುವುದು ಸಮುದಾಯದ ಅಭಿವೃದ್ದಿಯಿಂದ ಎಂಬ ಮಾತನ್ನು ಹೆಗ್ಗಡೆಯವರು ಇಲ್ಲಿ ಸತ್ಯವಾಗಿಸಿದ್ದಾರೆ. ತಾನೊಬ್ಬನೇ ಪ್ರಗತಿ ಹೊಂದುವುದಲ್ಲ, ಬದಲಾಗಿ ನೊಂದವರು ಕೂಡ ಪ್ರಗತಿ ಹೊಂದಬೇಕು ಎಂಬ ಉದ್ದೇಶವನ್ನು ಡಾ. ವಿರೇಂದ್ರ ಹೆಗ್ಗಡೆ ಹೊಂದಿದ್ದಾರೆ.
ಮಹಿಳೆಯವರ ಆರ್ಥಿಕ ಸಬಲೀಕರಣದಿಂದಾಗಿ ಆತ್ಮವಿಶ್ವಾಸ ಹೆಚ್ಚಾಗಿದೆ. ಬದುಕಿಗೆ ಅವಶ್ಯಕವಾದ ಮನೆ, ಹಸು, ಕೃಷಿ ಇತ್ಯಾದಿಗಳಿಗೆ ಯೋಜನೆ, ಹಣದ ಮೂಲಕ ಸಹಕರಿಸುತ್ತದೆ. ಮಾತ್ರವಲ್ಲದೆ, ಅವರಲ್ಲಿ ಹಣ ಬಳಕೆಯ ಸಂಸ್ಕಾರವನ್ನೂ ಕಲಿಸುತ್ತದೆ. ಹೀಗಾಗಿ ಸಾಲದ ಮರುಪಾವತಿ ಕೂಡ ಸುಸೂತ್ರವಾಗಿ ನಡೆಯುತ್ತಿದೆ ಎಂದರು.
ವಿಮಾ ಯೋಜನೆಯೂ ಕೂಡ ಕುಟುಂಬದ ಭವಿಷ್ಯದ ದೃಷ್ಟಿಯಿಂದ ಯೋಗ್ಯವಾಗಿ ಪರಿಣಮಿಸಲಿದೆ. ಇದು ೪೦ ಲಕ್ಷ ಜನರನ್ನು ತಲುಪುತ್ತದೆ ಎಂಬುದೇ ಹೆಮ್ಮೆಯ ವಿಚಾರ. ಹೃದಯ ಮುಟ್ಟುವ ಕೆಲಸ ಹೆಗ್ಗಡೆಯವರು ಮಾಡುತ್ತಿದ್ದಾರೆ. ಧರ್ಮವು ಪ್ರತಿಯೊಂದು ಹಂತದಲ್ಲೂ ಕೆಲಸ ಮಾಡುತ್ತಿದೆ ಎಂದು ಸಚಿವೆ ನಿರ್ಮಾಲಾ ತಿಳಿಸಿದ್ದಾರೆ.