ಉಡುಪಿ, ಆ.23 (DaijiworldNews/HR): ಶಾಲಾರಂಭಕ್ಕೆ ಯಾವುದೇ ಒತ್ತಡ ಇಲ್ಲ. ಉಡುಪಿಯ ಮಕ್ಕಳಿಗೂ ಶಾಲೆ ಆರಂಭ ಆಗಬೇಕು ಎನ್ನುವುದು ನಮ್ಮ ಆಸೆ. ಹಾಗಾಗಿ ಈಗಾಗಲೇ ಪ್ರತಿದಿನ 3000 ಟೆಸ್ಟಿಂಗ್ ಮಾಡುತ್ತಿದ್ದು, 6000-7000ವರೆಗೆ ಹೆಚ್ಚಿಸಲಾಗಿದೆ. ಇನ್ನು 10000ವರೆಗೆ ಟೆಸ್ಟಿಂಗ್ ಮಾಡಿಸಬೇಕಾಗಿದೆ. ಈ ಅಗಸ್ಟ್ ತಿಂಗಳ ಅಂತ್ಯಕ್ಕೆ ಶೇ 2% ಕೆಳಗೆ ಬರಬೇಕಾಗಿದೆ. ಆ ನಿಟ್ಟಿನಲ್ಲಿ ಕಾರ್ಯಚರಣೆ ಮಾಡಲು ಎಲ್ಲ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವೈದ್ಯರಿಗೆ ಸೂಚನೆ ನೀಡಲಾಗಿದೆ, ಜಿಲ್ಲಾಡಳಿತ, ಜಿಲ್ಲಾಪಂಚಯತ್ ಅದನ್ನ ಗಮನಿಸುತ್ತಿದ್ದು, ಅಗಸ್ಟ್30 ರೊಳಗೆ ಕೊರೊನಾಪಾಸಿಟಿವ್ ದರ 2% ಕೆಳಗೆ ಬಂದರೆ ಸರಕಾರವನ್ನ ಶಾಲೆ ಆರಂಭಿಸುವಂತೆ ನಾವು ಕೇಳಬಹುದು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ರಾಜ್ಯಮಟ್ಟದಲ್ಲಿ ಕೋವಿಡ್ ಪರಿಸ್ಥಿತಿಯನ್ನು ನೋಡಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಕೋವಿಡ್ ಕಡಿಮೆ ಆಗ್ತಿಲ್ಲ. ಸುಮಾರು ಎರಡು ತಿಂಗಳುಗಳ ಕಾಲ ಒಂದೇ ರೀತಿಯಾಗಿ ಶೇ 2.5 ನಿಂಂದ ಶೇ 3 ರೊಳಗೆ ಬರ್ತಿದೆ. ಇನ್ನು ಅಲ್ಲಲ್ಲಿ ಕೋವಿಡ್ ನಿಯಮ ಉಲ್ಲಂಟನೆ ಆಗ್ತಿದೆ. ಹಾಗಾಗಿ ಟೆಸ್ಟ್ ಹೆಚ್ಚು ಮಾಡಿದ್ದೇವೆ. ನಿಯಮ ಉಲ್ಲಂಘನೆಯಾಗುವುದನ್ನು ತಡೆ ಮಾಡಿದರೆ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯ ಅಂತ ತಜ್ಞರ ಸಮಿತಿ ಸಭೆ ಕರೆದಾಗ ಉಲ್ಲಂಘನೆಯಾಗುವುದನ್ನು ಆದಷ್ಟು ಕಡಿಮೆ ಮಾಡಬೇಕು ಅಂತ ಹೇಳಿದ್ದಾರೆ. ಮಾಸ್ಕ್ ಹಾಕುವುದಕ್ಕೆ ಬಹಳಷ್ಟು ಕಡೆ ನಿರ್ಲಕ್ಷ್ಯ ಕಂಡು ಬರ್ತಿದೆ. ಆದ್ದರಿಂದ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ" ಎಂದರು.
ಕೊರೊನಾ ನಿಯಮ ಉಲ್ಲಂಘನೆಯ ದರ ಕಡಿಮೆ ಆಗಲೇ ಬೇಕು. ಬೇರೆ ಎಲ್ಲಾ ಕಡೆ ಶಾಲೆ ಕಾಳೇಜು ಆರಂಭ ಆಗ್ತಿದೆ. ನಮ್ಮ ಜಿಲ್ಲೇಯಲ್ಲಿ ಆಗ್ತಿಲ್ಲ. ಆ ನಿಟ್ಟಿನಲ್ಲಿ ಇನ್ನೊಂದಷ್ಟು ಕಠಿಣ ಕ್ರಮ ಜರುಗಿಸಬೇಕಾಗಿದೆ. ಸಾರ್ವಜನಿಕರು ಟೆಸ್ಟಿಂಗ್ಗೆ ಸಹಕರಿಸಬೇಕು. ಕೋವಿಡ್ ನಿಯಮ ಪಾಲಿಸಿ ಎಂದು ಡಿಸಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು "ಲಸಿಕೆ ನೀಡುವುದರಲ್ಲಿ ಉಡುಪಿ ರಾಜ್ಯದಲ್ಲೇ ಎರಡನೆಯ ಸ್ಥಾನ ಪಡೆದಿದೆ. ಅರ್ಹರಿಗೆ 64% ಲಸಿಕೆ ನೀಡಿದ್ದೇವೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 85% ಲಸಿಕೆ ನೀಡಲಾಗಿದೆ. ಇನ್ನುಳಿದ 15% ಕೂಡ ಪೂರ್ಣ ಮಾಡಬೇಕು. ಮೊದಲನೆ ಮತ್ತು ಎರಡನೆ ಅಲೆಯಲ್ಲಿ ಹೆಚ್ಚು 60ವರ್ಷ ಮೇಲ್ಪಟ್ಟವರೇ ಸಾವಿಗೀಡಾಗಿದ್ದಾರೆ. ಉಳಿದ 15% ಗಾಗಿ ಮನೆ ಮನೆಗೆ ಹೋಗಿ ಕಾರ್ಯಚರಣೆ ಮಾಡಲು ನಿರ್ಧಾರ ಮಾಡಿದೆ" ಎಂದರು.
"ಪ್ರಸ್ತುತ 20000 ದಷ್ಟು ಎರಡನೇ ಡೋಸ್ಗಾಗಿ ಬಾಕಿ ಇದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ 8ರಿಂದ 10 ಸಾವಿರವರೆಗೆ ಲಸಿಕೆ ಬರ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಅರ್ಹರಿಗೆ ಲಸಿಕೆ ಸಿಗುವಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರತಿದಿನ 20000 ಲಸಿಕೆ ಕೊಡುವಷ್ಟು ಸಾಮರ್ಥ್ಯ ಜಿಲ್ಲೆಗಿದೆ" ಎಂದಿದ್ದಾರೆ.
"ಕೋವಿಡ್ ಪರೀಕ್ಷೆ, ಸ್ವಾಭ್ ಸಂಗ್ರಹ ಮಾಡಲು ಸುಮಾರು 65 ತಂಡಗಳು ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿದೆ. 65 ಸ್ವಾಬ್ ಕಲೆಕ್ಟರ್ , 65 ಡಾಟಾ ಎಂಟರ್ಸ್ನ್ನು ಪ್ರತಿ ತಂಡಕ್ಕೆ ಒದಗಿಸಲಾಗಿದೆ. ಇರುವಂತಹ ಸೌಲಭ್ಯವನ್ನ ಗರಿಷ್ಟ ಮಟ್ಟದಲ್ಲಿ ಬಳಸಿಕೊಳ್ಳಬೇಕು. ಈಗ ಒಬ್ಬ 60-70 ಸ್ವಾಬ್ ಸಂಗ್ರಹ ಮಾಡ್ತ ಇದ್ದಾರೆ, ಅದನ್ನ 100-120 ಮಾಡಿದ್ದರೆ, ಆರಾಮವಾಗಿ ನಮ್ಮ ಗುರಿ ತಲುಪಬಹುದು" ಎಂದು ಹೇಳಿದ್ದಾರೆ.