ನವದೆಹಲಿ,ಅ 29(MSP): ಅಯೋಧ್ಯೆಯ ರಾಮ ಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. 2019ರ ಜನವರಿಯಲ್ಲಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ , ಕೆ.ಎಂ ಜೋಸೆಫ್ ಅವರನ್ನ ಒಳಗೊಂಡ ನ್ಯಾಯಪೀಠ ತಿಳಿಸಿದೆ.
ಈ ವಿವಾದಕ್ಕೆ ಸಂಬಂಧಪಟ್ಟಂತೆ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ರಾಮ ಜನ್ಮಭೂಮಿಯನ್ನು 3 ಭಾಗಗಳಾಗಿ ಹಂಚಿ ಆದೇಶ ನೀಡಿತ್ತು. ವಿವಾದಿತ ಪ್ರದೇಶವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಪ್ ಮಂಡಳಿಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ವಿವಿಧ ವರ್ಗಗಳ ಕಕ್ಷಿದಾರರು ಸುಪ್ರೀಂ ಗೆ ಮೇಲ್ಮನವಿ ಸಲ್ಲಿಸಿದ್ದರು. ಜಸ್ಟಿಸ್ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಪೀಠ "ವಿವಾದಿತ ಅಯೋಧ್ಯೆ ಭೂ ಮಾಲಕತ್ವವನ್ನು ಇತ್ಯರ್ಥಪಡಿಸುವ ವಿಚಾರಣೆಯನ್ನು ಹೊಸ ಪೀಠ ಅಥವಾ ಈಗಿನ ಪೀಠ ಆರಂಭಿಸಲಿದೆ' ಎಂದು ಹೇಳಿತು.
ಅಯೋಧ್ಯೆ ರಾಮ ಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿದ ಇಂದಿನ ಸುಪ್ರೀಂ ಕೋರ್ಟ್ ಕಲಾಪ ಕೇವಲ ಎರಡೇ ನಿಮಿಷಗಳಲ್ಲಿ ಮುಗಿದು ಹೋದದ್ದು ವಿಶೇಷ. 2019ರ ಜನವರಿಯಲ್ಲಿ ಅಯೋಧ್ಯೆ ಭೂ ವಿವಾದದ ವಿಚಾರಣೆಯನ್ನು ದಿನವಹಿ ನೆಲೆಯಲ್ಲಿ ನಡೆಸಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಪೀಠ ನಿರಾಕರಿಸಿದೆ.