ಬೆಂಗಳೂರು,ಅ 29(MSP): ಪದೇ ಪದೇ ದಾಖಲಾಗುತ್ತಿರುವ ದುನಿಯಾ ವಿಜಯ್ ಕುಟುಂಬದ ಬೀದಿ ಜಗಳದಿಂದ ಸುಸ್ತು ಬಿದ್ದಿರುವ ಗಿರಿ ನಗರ ಠಾಣೆಯ ಪೊಲೀಸರು ದುನಿಯಾ ವಿಜಯ್ ಒಳಗೊಂಡಂತೆ ಏಳು ಜನರ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಹೀಗಾಗಿ ನಟ ದುನಿಯಾ ವಿಜಯ್ ವಿರುದ್ದ ಪೊಲೀಸರು ವಿರಳ ಎನ್ನಬಹುದಾದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಆರ್ ಪಿಸಿ ಸೆಕ್ಷನ್ 107ರ ಅಡಿಯಲ್ಲಿ ದುನಿಯಾ ವಿಜಯ್, ಮಾತ್ರವಲ್ಲದೆ ಅವರ ಮಡದಿಯರಾದ ಮೊದಲನೇ ಪತ್ನಿ ನಾಗರತ್ನ್ ಹಾಗೂ ಎರಡನೇ ಪತ್ನಿ ಕೀರ್ತಿಗೌಡ , ದುನಿಯಾ ವಿಜಯ್ ತಂದೆ , ನಾಗರತ್ನ ಸಹೋದರ ಹಾಗೂ ಮತ್ತಿಬ್ಬರು ಬಾಡಿಗಾರ್ಡ್ ಗಳ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಂದ 20 ಲಕ್ಷ ಬಾಂಡ್ ಬರೆಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.
ಈ ಪ್ರಕರಣದಂತೆ ಒಂದು ಕುಟುಂಬದಿಂದ ಕಾನೂನು ಸುವ್ಯವಸ್ಥೆ ಅಲ್ಲದೆ ಸಮಾಜದ ಶಾಂತಿಗೆ ಧಕ್ಕೆ ಯಾದರೆ ಪೊಲೀಸರು 20 ಲಕ್ಷ ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಪದೇ ಪದೇ ಕುಟುಂಬ ಜಗಳದಿಂದ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ತಂದರೆ ಈ ವಿಶೇಷ ಸೆಕ್ಷನ್ ನಡಿ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಎಚ್ಚರಿಕೆ ನೀಡಿದ್ದಾರೆ.
.