ಉಡುಪಿ, ಆ 22 (DaijiworldNews/PY): ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುವ ಕೊರಗ (105) ಅವರು ಭಾನುವಾರ ವಯೋ ಸಹಜವಾಗಿ ನಿಧನರಾಗಿದ್ದಾರೆ.
ಕೊರಗ ಬುಡಕಟ್ಟು ಸಮುದಾಯಕ್ಕೆ ಸೇರಿದ ಗುರುವ ಕೊರಗ, ಹಿರಿಯಡ್ಕದ ಗುಡ್ಡೆ ಅಂಗಡಿಯ ಬಲ್ಕೋಡಿ ನಿವಾಸಿಯಾಗಿದ್ದಾರೆ. ಇವರು ಡೋಲು ಕಲಾವಿದ ಹಿರಿಯಡ್ಕದ ತೋಮ ಹಾಗೂ ತುಂಬೆ ದಂಪತಿ ಪುತ್ರ. ಇವರು ತಮ್ಮ 12ನೇ ವಯಸ್ಸಿನಿಂದಲೂ ಡೋಲು ಬಾರಿಸುವುದು ಹಾಗೂ ಬುಟ್ಟಿ ಹೆಣೆಯುವ ಕೆಲಸದಲ್ಲಿ ತೊಡಗಿಕೊಂಡಿದ್ದರು.
ಡೋಲು ನುಡಿಸುವ ಮೂಲಕ ಜನಪದ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸಿರುವ ಗುರುವ ಕೊರಗ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ 2017ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೇ, ಹಲವು ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.