ಉಡುಪಿ, ಅ 28(SM): ಮಾಜಿ ಸಿಎಂ ಯಡಿಯೂರಪ್ಪನವರ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಟೆಂಟ್ ಹಾಕಿದ್ದು, ಟೆಂಟ್ ಹಾಕಿದಷ್ಟು ಬಿಜೆಪಿಗೆ ಲಾಭ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ. ಅವರು ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಪ್ರತಿಕ್ರಿಯೆ ನೀಡಿದರು.
ಉಪಚುನಾವಣೆಯಲ್ಲಿ ರಾಮನಗರವೇ ಕುಮಾರಸ್ವಾಮಿಗೆ ಗಂಟಲಲ್ಲಿ ಸಿಲುಕಿಕೊಳ್ಳಲಿದೆ. ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಗೆದ್ದು ಬೀಗಲಿದೆ. ಕರಾವಳಿ ಜಿಲ್ಲೆಯಲ್ಲಿ ಬಂದ ಫಲಿತಾಂಶವೇ ಈ ಉಪಚುನಾವಣೆಯಲ್ಲಿ ಬರುತ್ತದೆ ಎಂದರು. ಇನ್ನು ಚುನಾವಣಾ ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿ ಸಾಯುವ ಮಾತುಗಳನ್ನು ಆಡುತ್ತಿದ್ದು, ಸಾಯ್ತೇನೆ ಅಂದ್ರೆ ಸರ್ಕಾರ ಸಾಯುತ್ತೆ ಎಂದು ವ್ಯಂಗ್ಯವಾಡಿದರು. ಅಧಿಕಾರ ಕಳೆದುಕೊಳ್ಳುತ್ತೇನೆ ಎಂಬ ಭಯದಿಂದ ಜನರಲ್ಲಿ ಕಾಳಜಿಯನ್ನುಂಟು ಮಾಡಿ ಅಧಿಕಾರವನ್ನು ಉಳಿಸುವ ಪ್ರಯತ್ನ ಕುಮಾರಸ್ವಾಮಿಯದು. ರಾಜ್ಯದ ಜನತೆಗೆ ಧೈರ್ಯ ತುಂಬುವ ಕೆಲಸ ನಾವು ಮಾಡುತ್ತೇವೆ ಎಂದರು.
ಮಂಗಳೂರಿನಲ್ಲೂ ಮರಳಿನ ಸಮಸ್ಯೆ ಉಂಟಾಗಿದ್ದು, ಉಗ್ರ ಚಳುವಳಿ ಹಮ್ಮಿಕೊಳ್ಳಲಾಗುವುದು. ಮಹಾತ್ಮಾ ಗಾಂಧಿಜಿಯವರು ಹೇಳಿಕೊಟ್ಟ ಉಪ್ಪಿನ ಸತ್ಯಾಗ್ರಹದ ಮಾದರಿಯಲ್ಲೇ ನಾಗರಿಕರು ಸ್ವತ: ತಾವೇ ಹೊಳೆಗಳಿಗೆ ಇಳಿದು ಮರಳು ಎತ್ತಿ ಆಕ್ರೋಶ ಹೊರ ಹಾಕಲಿದ್ದಾರೆ. ಕರಾವಳಿಯ ಮರಳಿನ ಸಮಸ್ಯೆಗೆ ಪ್ರತ್ಯೇಕ ನೀತಿ ಜಾರಿಗೆ ತರಲು ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.