ನವದೆಹಲಿ, ಅ 28 (MSP): 2019 ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲು ನೀಡಲಾದ ಭಾರತದ ಆಹ್ವಾನವನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ.
ಜನವರಿ 26ರ 2019 ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಕಳೆದ ಏಪ್ರಿಲ್ ನಲ್ಲಿಯೇ ಅಮೇರಿಕಾ ಅಧ್ಯಕ್ಷ ಟ್ರಂಪ್ ಗೆ ಆಹ್ವಾನ ನೀಡಲಾಗಿತ್ತು. ಆದರೆ ಟ್ರಂಪ್ ಅವರ ರಾಷ್ಟ್ರೀಯ ಕೆಲಸ ಕಾರ್ಯಗಳು ನಿಗದಿ ಆಗಿರುವುದರಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರತಿ ವರ್ಷ ಗಣರಾಜ್ಯೋತ್ಸವಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸುವುದು ಸಂಪ್ರದಾಯ. ಇದೇ ಕಾರಣದಿಂದ ಬರುವ ಗಣರಾಜ್ಯೋತ್ಸವಕ್ಕೆ ಟ್ರಂಪ್ ಗೆ ಆಹ್ವಾನ ನೀಡಲಾಗಿತ್ತು.
ಸಧ್ಯ ಭಾರತದ ಬಗ್ಗೆ ಅಸಮಾಧಾನದ ನಿಲುವನ್ನು ತಳೆದಿರುವ ಅಮೇರಿಕಾ, ಭಾರತಕ್ಕೆ ದಿಗ್ಬಂಧನದ ಬೆದರಿಕೆ ಒಡ್ಡಿತ್ತು. ಅಮೇರಿಕಾ ವಿರೋಧಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದ ಭಾರತ ರಷ್ಯಾದೊಂದಿಗೆ ಎಸ್-400 ಕ್ಷಿಪಣಿ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕಿತ್ತು. ಇದಲ್ಲದೆ ಇರಾನ್ನಿಂದ ತೈಲ ಆಮದು ಮಾಡಲು ತೀರ್ಮಾನಿಸಿತ್ತು. ರಷ್ಯಾದೊಂದಿಗೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳುವ ಯಾವುದೇ ದೇಶವಾದರೂ ಸರಿ ಪರೋಕ್ಷ ದಿಗ್ಬಂಧನ ಎದುರಿಸಬೇಕಾಗಬಹುದು ಎಂದು ಹಲವು ಬಾರಿ ಅಮೇರಿಕಾ ಬೆದರಿಕೆಯೊಡ್ಡಿತ್ತು.
ಇನ್ನು ಡೊನಾಲ್ಡ್ ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಲು ಭಾರತ ಹೆಚ್ಚು ಆಸಕ್ತಿ ತಳೆದಿದ್ದು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಲ್ಲದೇ ಇದ್ದರೆ ಫೆಬ್ರುವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷರಿಗೆ ಆತಿಥ್ಯ ನೀಡುವ ಬಗ್ಗೆ ಯೋಚಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.