ಬೆಂಗಳೂರು,ಅ 28 (MSP): ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿಗೌಡ ಅವರ ಮೇಲೆ ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಅವರು ಜೈಲು ಪಾಲಾಗಿದ್ದ ಸಂದರ್ಭ ಅವರ ಮೊದಲ ಪತ್ನಿ ನಾಗರತ್ನ ಅವರು 2 ನೇ ಪತ್ನಿ ಕೀರ್ತಿಗೌಡ ಅವರ ಮೇಲೆ ದಾಳಿ ನಡೆಸಿ ಹಿಗ್ಗಾಮುಗ್ಗಾ ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೀರ್ತಿಗೌಡ ಅವರು ಈ ಹಿಂದೆ ನೀಡಿದ್ದ ದೂರಿನ ಆಧಾರದ ಮೇರೆಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಹಲ್ಲೆ ಮತ್ತು ಅಂಗಾಂಗ ಊನಗೊಳಿಸಿದ ಆರೋಪದಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಒಂದು ಬಾರಿ ಎಫ್ಐಆರ್ ದಾಖಲಾದ ಬಳಿಕ ಹೆಚ್ಚುವರಿ ಸೆಕ್ಷನ್ ಸೇರ್ಪಡೆಗೊಳಿಸಲು ಕೋರ್ಟ್ ಸಹಮತಿ ಅಗತ್ಯ. ಈಗಾಗಲೇ ನಾಗರತ್ನ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು 309 ಅಡಿ ಪ್ರಕರಣ ದಾಖಲಾಗಿತ್ತು. ಇದೀಗ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ 326 ಸೆಕ್ಷನ್ ಹಾಕಲು ಪೊಲೀಸರು ನಿರ್ಧಾರ ಮಾಡಿದ್ದು, ಈ ಬಗ್ಗೆ ಕೋರ್ಟ್ ಗೆ ಪೊಲೀಸರು ಮನವಿ ಮಾಡಲಿದ್ದಾರೆ. ಈ ಪ್ರಕರಣಕ್ಕೆ ಐಪಿಸಿ ಸೆಕ್ಷನ್ 236 ಸೇರ್ಪಡೆ ಮಾಡಲು ಪೊಲೀಸರು ತೀರ್ಮಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೀರ್ತಿ ಗೌಡ ತನ್ನ ಮನೆಯಲ್ಲಿ ಕುಳಿತಿದ್ದ ಸಂದರ್ಭ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಅವರು ಏಕಾಏಕಿ ಮನೆಗೆ ನುಗ್ಗಿ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆದರೆ ಕೀರ್ತಿ ಗೌಡ ಮೇಲೆ ಹಲ್ಲೆ ನಡೆಸಿದ ಬಳಿಕ ನಾಗರತ್ನ ಅವರು ಗಿರಿನಗರ ಠಾಣೆಗೆ ತೆರಳಿ , ಮಕ್ಕಳನ್ನು ನೋಡಲೆಂದು ಅಲ್ಲಿಗೆ ಹೋದಾಗ ಕೀರ್ತಿ ಗೌಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರನ್ನೂ ದಾಖಲಿಸಿದ್ದರು.
ನಾಗರತ್ನ ಹಲ್ಲೆ ನಡೆಸಿದ ವೇಳೆ ಪುತ್ರಿ ಮೋನಿಕಾ ಮನೆಯೊಳಗಿದ್ದರು. ಮನೆಯಲ್ಲಿದ್ದ ಇತರರು ನಾಗರತ್ನ ಅವರನ್ನು ತಡೆದಿದ್ದರು. ಇನ್ನು ಈ ಬಗ್ಗೆ ಭಾನುವಾರ ಪತ್ರಿಕಾಗೋಷ್ಟಿ ನಡೆಸಿದ ವಿಜಯ್ ಅವರ ಗೆಳೆಯ ಮಂಜು ಮತ್ತು ವಕೀಲರು, ನಾಗರತ್ನ ಅವರು ಸುಳ್ಳು ದೂರು ನೀಡಿ ವಿಜಯ್ ಅವರ ಮೇಲೆ ಸಂಚು ನಡೆಸಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಸದ್ಯ ನಾಗರತ್ನ ಮತ್ತು ಪುತ್ರಿ ಮೋನಿಕಾ ಅವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆದರೆ ನಾಗರತ್ನ ಬಾಗಿಲು ಹಾಕಿಕೊಂಡು ಮನೆಯಲ್ಲಿ ಕುಳಿತಿದ್ದು, ಪೊಲೀಸರು ಮನೆಯ ಮುಂಭಾಗದಲ್ಲಿಯೇ ಕಾಯುತ್ತಿದ್ದರು. ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.