ಮಂಗಳೂರು,ಅ 28 (MSP): ಜಿಲ್ಲೆಯಲ್ಲಿ ಶಂಕಿತ ಎಚ್1ಎನ್1ಗೆ ಮತ್ತೊಂದು ಜೀವ ಬಲಿಯಾಗಿದೆ. ಹೀಗಾಗಿ ಒಂದೇ ತಿಂಗಳಿನಲ್ಲಿ ಸಾವಿನ ಸಂಖ್ಯೆ ಐದಕ್ಕೇರಿದೆ. ಬಂಟ್ವಾಳದ ಕನ್ಯಾನ ಮೂಲದ ಉಮೇಶ್ ಗೌಡ ಅವರ ತಾಯಿ ಲಲಿತಾ (72) ಇವರು ಶಂಕಿತ ಎಚ್1ಎನ್1ಗೆ ಬಲಿಯಾದವರು.
ಲಲಿತಾ ಅಸೌಖ್ಯದ ಕಾರಣ ಹಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಅಲ್ಲಿಂದ ಅ.26 ಶುಕ್ರವಾರ ರಾತ್ರಿ ಅವರನ್ನು ವೆನ್ಲ್ಯಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರದಂದು ಮೃತಪಟ್ಟಿದ್ದಾರೆ. ಅವರು ಶಂಕಿತ ಎಚ್1ಎನ್1ನೊಂದಿಗೆ ಇತರ ವಯೋಸಹಜ ಕಾಯಿಲೆಗಳಿಂದಲೂ ಬಳಲುತ್ತಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಹಿಂದೆ ಬಂಟ್ವಾಳದ ಒಂದೇ ಕುಟುಂಬದ ಸಜಿಪನಡುವಿನ ಝಬೀನಾ (27), ಅವರ ತಾಯಿ ಅವ್ವಮ್ಮ (48), ವಾಮಂಜೂರಿನ ಕೆ. ಅಬ್ದುಲ್ಲ (50) ಹಾಗೂ ಉಳ್ಳಾಲ ಹಳೆಕೋಟೆ ನಿವಾಸಿ ಜಮೀಲಾ (38) ಅಕ್ಟೋಬರ್ 8 ಶಂಕಿತ ಎಚ್1ಎನ್1ಗೆ ಸಾವಿಗೀಡಾಗಿದ್ದರು. ಇದೀಗ ಲಲಿತಾ ಮೃತಪಟ್ಟಿದ್ದು, ಹೀಗಾಗಿ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲೇ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಎಚ್1ಎನ್1ಗೆ ಏಳು ಮಂದಿ ಬಲಿಯಾಗಿದ್ದರು.
ಜಿಲ್ಲೆಯಲ್ಲಿ 2018ರ ಜನವರಿಯಿಂದ ಅ.25 ರವರೆಗೆ ಒಟ್ಟು 39 ಎಚ್1ಎನ್1 ಪಾಸಿಟಿವ್ ಪ್ರಕರಣ ಕಂಡು ಬಂದಿತ್ತು, ಇದರಲ್ಲಿ ಈ ತಿಂಗಳಿನಲ್ಲಿಯೇ 24 ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಸ್ವಲ ಮಂದಿ ಗುಣಮುಖರಾಗಿ ಮನೆಗೆ ತೆರಳಿದರೆ, ಉಳಿದವರು ವಿವಿಧ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.