ಮಂಗಳೂರು, ಅ27(SS): ನಗರದ ಕುದ್ರೋಳಿಯಲ್ಲಿರುವ ಕಸಾಯಿಖಾನೆಯಲ್ಲಿ ನಿರಂತರ ಗೋಹತ್ಯೆ ನಡೆಯುತ್ತಿದ್ದು, ಪ್ರತೀ ತಿಂಗಳಿಗೆ 350 - 400 ಜಾನುವಾರುಗಳ ಹತ್ಯೆ ನಡೆಯುತ್ತಿದೆ ಎಂದು ವಿಹಿಂಪ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನಿದೆ. ಆದರೆ ಈ ಕಾನೂನಿನ ಪಾಲನೆಯಾಗುತ್ತಿಲ್ಲ. ಅದರಲ್ಲೂ ಕುದ್ರೋಳಿ ಕಸಾಯಿಖಾನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋ ಹತ್ಯೆ ಮಾಡಲಾಗುತ್ತಿದೆ. ಹಿಂದೂ ಧರ್ಮಕ್ಕೆ ಮತ್ತು ಕಾನೂನಿಗೆ ವಿರುದ್ಧವಾಗಿ ಗೋಹತ್ಯೆ ನಡೆಸುತ್ತಿರುವ ಈ ಅಕ್ರಮ ಕಸಾಯಿಖಾನೆಯನ್ನು ಮುಚ್ಚಬೇಕು ಎಂದು ಹೇಳಿದರು.
ಗೋಹತ್ಯೆ ವಿಚಾರವಾಗಿ ಪೂರ್ಣ ದಾಖಲೆಯೊಂದಿಗೆ ವಿನಯ್ ಎಲ್ ಶೆಟ್ಟಿ ನೀಡಿದ ದೂರಿಗೆ ಎಫ್.ಐ.ಆರ್ ದಾಖಲಿಸಬೇಕು. ಈ ದೂರಿನ ಬಗ್ಗೆ ಸಂಪೂರ್ಣ ತನಿಖೆಯಾಗುವ ತನಕ ದೂರಿನಲ್ಲಿ ಆರೋಪಿಗಳಾಗಿರುವ ಮ.ಸ.ಪಾದ ಈಗಿನ ಆಯುಕ್ತ ನಜೀರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕನಿಷ್ಟ ಮೂರು ತಿಂಗಳು ಅಮಾನತಿನಲ್ಲಿಡಬೇಕು. ಆರೋಪ ಸಾಬೀತಾಗುತ್ತಿದ್ದಂತೆಯೇ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ದಿನನಿತ್ಯ ಇಷ್ಟೊಂದು ಗೋವುಗಳು ಸಾಗಾಟವಾಗುತ್ತಿದ್ದರೂ ಜಿಲ್ಲಾಡಳಿತ ಸುಮ್ಮನಿದೆ. ತಕ್ಷಣ ಈ ಬಗ್ಗೆ ತನಿಖೆ ನಡೆಸಿ ರಾಜ್ಯದಲ್ಲಿ ಗೋ ಹತ್ಯೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.