ಮಂಗಳೂರು, ಆ 17 (DaijiworldNews/MS): ಕೊರೊನಾ ಸೋಂಕಿನ ಭಯಕ್ಕೆ ಕುಳಾಯಿ ಚಿತ್ರಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್ -ಗುಣವತಿ ದಂಪತಿಗಳಿಗೆ ಕೊರೊನಾ ಸೋಂಕು ತಗುಲಿರಲಿಲ್ಲ ಎಂದು ತಿಳಿದುಬಂದಿದೆ. ಇಬ್ಬರಿಗೂ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಮಂಗಳೂರು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದು ಈ ಮೂಲಕ ಪ್ರಕರಣಕ್ಕೆ ಪ್ರಮುಖ ತಿರುವು ದೊರಕಿದೆ.
ಗುಣವತಿ ಸುವರ್ಣ ಅವರು ಡೆತ್ ನೋಟ್ ಬರೆದಿಟ್ಟಿದ್ದು ಕೊರೊನಾ ಲಕ್ಷಣಗಳು ಕಾಣಿಸಿದ್ದು, ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಈಗ ನನ್ನ ಪತಿಗೂ ಕೊರೊನಾ ಗುಣಲಕ್ಷಣ ಕಾಣಿಸುಕೊಳ್ಳುತ್ತಿದೆ. ಬ್ಲ್ಯಾಕ್ ಫಂಗಸ್ ನಿಂದ ಕಣ್ಣು ಮತ್ತು ಇತರ ಭಾಗಗಳನ್ನು ಕಳೆದುಕೊಂಡಿದ್ದನ್ನು ನೋಡಿದಾಗ, ನಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ನಮಗೂ ಭಯ ಕಾಡುತ್ತಿದೆ. ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಇದಲ್ಲದೆ ಗುಣವತಿ ಅವರಿಗೆ ಇತರ ಆರೋಗ್ಯ ಸಮಸ್ಯೆಯೂ ಇರುವುದನ್ನು ಬರೆದುಕೊಂಡಿದ್ದರು. ಮಕ್ಕಳಿಲ್ಲ ಕೊರಗು ಕೂಡಾ ದಂಪತಿಗಳನ್ನು ಕಾಡಿತ್ತು.
ಕೊರೊನಾ ಇದೇ ಎಂದು ಅವರೇ ಸ್ವಂತ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಕೊರೊನಾ ಭಯದಿಂದ ನಾನು ಮತ್ತು ನನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತ ಬೆಳಗ್ಗೆ 6.40ರ ಸಮಯಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಈ ವೇಳೆ ತಕ್ಷಣ ಕಮಿಷನರ್ ಕಾಲ್ ಮಾಡಿ ದೈರ್ಯ ತುಂಬಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಿರಲಿಲ್ಲ. ದಂಪತಿಗಳು ವಾಸವಾಗಿದ್ದ ಪ್ಲ್ಯಾಟ್ ನ ಲೊಕೇಶನ್ ಟ್ರೇಸ್ ಮಾಡಿ, ಪೊಲೀಸ್ ಸಿಬ್ಬಂದಿ ಬಾಗಿಲು ಒಡೆದು ನೋಡಿದರೂ ಅಷ್ಟರಲ್ಲೇ ದಂಪತಿಗಳು ದುಡುಕಿನ ನಿರ್ಧಾರ ಕೈಗೊಂಡಿದ್ದರು.