ಮಂಗಳೂರು, ಅ27(SS): ಪುಟ್ಟ ಪುಟ್ಟ ಶಾಲಾ ಮಕ್ಕಳನ್ನು ಮಿತಿಮೀರಿ ಆಟೋರಿಕ್ಷಾ ಮತ್ತು ವ್ಯಾನ್ಗಳಲ್ಲಿ ತುಂಬಿಸಿಕೊಂಡು ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ ಇನ್ಮುಂದೆ ಮಂಗಳೂರು ನಗರ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ನಗರದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿರುವ ಡಿಸಿಪಿ ಉಮಾ ಪ್ರಶಾಂತ್ ಅವರು, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ನಿರಂತರ ಫೋನ್ ಕರೆಗಳಲ್ಲಿ ದೂರುಗಳು ಬರುತ್ತಿವೆ. ಅಲ್ಲದೆ ಫೋನ್ ಇನ್ ಕಾರ್ಯಕ್ರಮದಲ್ಲೂ ಈ ಬಗ್ಗೆ ದೂರು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳನ್ನು ಹೆಚ್ಚು ಹಾಕಿಕೊಂಡು ಹೋಗುವ ಚಾಲಕರು ಕಂಡು ಬರುತ್ತಿದ್ದು, ಇದು ಅಪಘಾತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪೋಷಕರು ಮತ್ತು ಶಾಲಾಡಳಿತ ಮಂಡಳಿ ಅಧಿಕೃತರು ಕೂಡಾ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಗರ ಪೊಲೀಸರು ಕಠಿಣ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಡಿಸಿಪಿ ಉಮಾಪ್ರಶಾಂತ್ ಚಾಲಕರನ್ನು ಎಚ್ಚರಿಸಿದ್ದಾರೆ.
ಜೊತೆಗೆ ಪರವಾನಿಗೆ ಇಲ್ಲದ, ಕಾನೂನು ಮೀರಿ ಚಾಲನೆ ಮಾಡುವ ವಾಹನ ಚಾಲಕರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.