Karavali
ಉಡುಪಿ: ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಜಾರಿ
- Mon, Aug 16 2021 06:56:42 PM
-
ಉಡುಪಿ, ಆ 16 (DaijiworldNews/PY): ಕೊರೊನಾ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಕಠಿಣ ಕ್ರಮಗಳನ್ನ ಜಾರಿ ಮಾಡಿದ್ದಾರೆ.
ಜಿಲ್ಲೆಯಾದ್ಯಂತ ರಾತ್ರಿ 9.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಕಟ್ಟುನಿಟ್ಟಿನ ರಾತ್ರಿ ಕರ್ಪ್ಯೂ ಜಾರಿಯಲ್ಲಿದ್ದು, ಈ ಕೆಳಗಿನ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗಡೆ ಜಿಲ್ಲೆಯಾದ್ಯಂತ ಅನುಮತಿಸಲಾಗಿದೆ.
"ಪಬ್ಗಳಿಗೆ ಅನುಮತಿ ಇರುವುದಿಲ್ಲ. ಕೊರೊನಾ ಸೂಕ್ತ ನಡವಳಿಕೆಯನ್ನು ಹಾಗೂ ಸಂಬಂಧಪಟ್ಟ ಇಲಾಖೆಯವರು ಹೊರಡಿಸುವ ಕೊರೊನಾ ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸುವ ಷರತ್ತುಗಳೊಂದಿಗೆ ಸ್ಪರ್ಧಾತ್ಮಕ ತರಬೇತಿಗಳಿಗೆ ಮಾತ್ರ ಈಜು ಕೊಳಗಳನ್ನು ತೆರೆಯಲು ಅನುಮತಿಸಿದೆ. ಕೊರೊನಾ ಸೂಕ್ತ ಶಿಷ್ಟಾಚಾರವನ್ನು ಅನುಸರಿಸುವ ಷರತ್ತುಗಳೊಂದಿಗೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಮಾತ್ರ ಕ್ರೀಡಾ ಸಂಕೀರ್ಣಗಳನ್ನು/ ಸ್ಟೇಡಿಯಂಗಳನ್ನು ತೆರೆಯಲು ಅನುಮತಿಸಿದೆ. ಆದರೆ ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ" ಎಂದು ತಿಳಿಸಿದ್ದಾರೆ.
"ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಇತರೆ ಸಭೆಗಳು ಹಾಗೂ ಸಮಾರಂಭಗಳು ಮತ್ತು ಸಾರ್ವಜನಿಕರು ಒಟ್ಟುಗೂಡುವುದನ್ನು ನಿರ್ಬಂಧಿಸಲಾಗಿದೆ. ಕೊರೊನಾ ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸುವ ಷರತ್ತುಗಳೊಂದಿಗೆ ಮದುವೆ/ ಕೌಟುಂಬಿಕ ಶುಭ ಸಮಾರಂಭಗಳಿಗೆ ಸರ್ಕಾರದ ಹಿಂದಿನ ಮಾರ್ಗಸೂಚಿಯಂತೆ ಈ ಕೆಳಗೆ ನಿಗದಿಪಡಿಸಿದ ಷರತ್ತಿಗೊಳಪಟ್ಟು 100 ಜನರಿಗೆ ಮೀರದಂತೆ ನಡೆಸಲು ಅನುಮತಿಸಲಾಗಿದೆ.
ಮದುವೆ/ ಕೌಟುಂಬಿಕ ಶುಭ ಸಮಾರಂಭಗಳನ್ನು ಆಯೋಜಿಸುವವರು ಆಮಂತ್ರಣ ಪತ್ರ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳೊಂದಿಗೆ ಸಹಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಹಶೀಲ್ದಾರ್ ಅವರಿಗೆ ಸಲ್ಲಿಸಬೇಕು. ಅರ್ಜಿಯ ಸ್ವೀಕೃತಿಯ ಮೇರೆಗೆ, ತಹಶೀಲ್ದಾರರು ಪ್ರತಿ ಮದುವೆ/ ಕೌಟುಂಬಿಕ ಶುಭ ಸಮಾರಂಭ ಕಾರ್ಯಕ್ರಮಕ್ಕೆ 100 ಪಾಸ್ಗಳನ್ನು ನೀಡಬೇಕು. ಪಾಸ್ ಹೊಂದಿರುವ ಜನರಿಗೆ ಮಾತ್ರ ಮದುವೆ/ ಕೌಟುಂಬಿಕ ಶುಭ ಸಮಾರಂಭ ಕಾರ್ಯಕ್ಕೆ ಹಾಜರಾಗಲು ಅವಕಾಶವಿರುತ್ತದೆ ಮತ್ತು ಪಾಸ್ ಅನ್ನು ವರ್ಗಾಯಿಸಲು ಅವಕಾಶವಿರುವುದಿಲ್ಲ. ಮದುವೆ/ ಕೌಟುಂಬಿಕ ಶುಭ ಸಮಾರಂಭ ಕಾರ್ಯಕ್ಕೆ ಹಾಜರಾಗುವ ಜನರು ಕೊರೊನಾ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಅವರ ಪಾಸ್ಗಳನ್ನು ಅಧಿಕೃತ ಪರಿಶೀಲನಾ ಅಧಿಕಾರಿಗಳಿಗೆ ತೋರಿಸಬೇಕು" ಎಂದು ಹೇಳಿದ್ದಾರೆ."ಕೊರೊನಾ ಸೂಕ್ತ ನಡವಳಿಕೆಯಂತೆ ಅಂತ್ಯ ಸಂಸ್ಕಾರಕ್ಕೆ 20 ಜನಕ್ಕೆ ಮೀರದಂತೆ ನಡೆಸಲು ಅನುಮತಿಸಲಾಗಿದೆ. ಪೂಜಾ ಸ್ಥಳಗಳಾದ ದೇವಾಲಯಗಳು, ಮಸೀದಿಗಳು, ಚರ್ಚುಗಳು, ಗುರುದ್ವಾರಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿಸಲಾಗಿದೆ. ಕೊರೊನಾ ಸಮುಚಿತ ವರ್ತನೆಗಳನ್ನು ಪಾಲಿಸುದರೊಂದಿಗೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಹೊರಡಿಸಲಾದ ಕೊರೊನಾ ಪ್ರಮಾಣಿತ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಗೊಳಪಟ್ಟು ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಅನುಮತಿಸಿದೆ" ಎಂದು ತಿಳಿಸಿದ್ದಾರೆ.
"ಧಾರ್ಮಿಕ ಸ್ಥಳಗಳಲ್ಲಿ ಜಾತ್ರೆಗಳು, ದೇವಾಲಯ ಉತ್ಸವಗಳು/ಹಬ್ಬಗಳು, ಮೆರವಣಿಗೆಗಳು ಮತ್ತು ಒಟ್ಟುಗೂಡುವುದನ್ನು ನಿರ್ಬಂಧಿಸಲಾಗಿದೆ. ಕೊರೊನಾ ಸೂಕ್ತ ನಡವಳಿಕೆಯಂತೆ ಶೇ. 100 ರಷ್ಟು ಆಸನ ಸಾಮರ್ಥ್ಯದವರೆಗೆ ಸಾರ್ವಜನಿಕ ಸಾರಿಗೆಗಳಿಗೆ ಅನುಮತಿಸಲಾಗಿದೆ. ಎಲ್ಲಾ ಅಂಗಡಿಗಳು, ರೆಸ್ಟೋರೆಂಟ್ಗಳು, ಮಾಲ್ಗಳು, ಖಾಸಗಿ ಕಚೇರಿಗಳು ಮತ್ತು ಮುಚ್ಚಿದ ಸ್ಥಳಗಳಲ್ಲಿ, ಕೊರೊನಾ ಸೂಕ್ತ ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರನ್ವಯ ಕ್ರಮ ಕೈಕೊಳ್ಳಲಾಗುವುದು.
ಸಿನೆಮಾ ಹಾಲ್ಗಳು/ಮಲ್ಟಿಪ್ಲೆಕ್ಸ್ಗಳು/ ಚಿತ್ರಮಂದಿರಗಳು/ ರಂಗಮಂದಿರಗಳು/ ಸಭಾಂಗಣಗಳು ಮತ್ತು ಅಂತಹದೇ ರೀತಿಯ ಸ್ಥಳಗಳಲ್ಲಿ ಶೇ. 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕೊರೊನಾ ಸೂಕ್ತ ನಡವಳಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳು ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಷರತ್ತುಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿಯನ್ನು ನೀಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ."ಉನ್ನತ ಶಿಕ್ಷಣ ಇಲಾಖೆಗೆ ಸೇರಿದ ಕಾಲೇಜುಗಳು ಮತ್ತು ಸಂಸ್ಥೆಗಳನ್ನು ಕೊರೊನಾ ಸೂಕ್ತ ನಡವಳಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳು ನೀಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಷರತ್ತುಗಳೊಂದಿಗೆ ತೆರೆಯಲು ಅನುಮತಿಸಲಾಗಿದೆ. ವಿದ್ಯಾರ್ಥಿಗಳು, ಬೋಧನೆ ಮತ್ತು ಬೋಧಕೇತರ / ಇತರ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆಯ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ತೆಗೆದುಕೊಂಡು ಮಾತ್ರ ಕಾಲೇಜುಗಳು / ಸಂಸ್ಥೆಗಳಿಗೆ ಹಾಜರಾಗಲು ಅನುಮತಿಸಲಾಗಿದೆ. ವಿದ್ಯಾರ್ಥಿಗಳ ಹಾಜರಾತಿ ಐಚ್ಚಿಕವಾಗಿರುತ್ತದೆ.
ದೀರ್ಘಾವಧಿಯ ತಾಂತ್ರಿಕ ಕೋರ್ಸ್ಗಳನ್ನು ಒಳಗೊಂಡಂತೆ ಎಲ್ಲಾ ಕೌಶಲ್ಯ ಅಭಿವೃದ್ಧಿ ತರಬೇತಿಗಳಿಗೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಷರತ್ತುಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿಯನ್ನು ನೀಡಲಾಗಿದೆ. ವಿದ್ಯಾರ್ಥಿಗಳು, ಬೋಧನೆ ಮತ್ತು ಬೋಧಕೇತರ / ಇತರ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆಯ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ತೆಗೆದುಕೊಂಡು ಮಾತ್ರ ಸಂಸ್ಥೆಗಳಿಗೆ ಹಾಜರಾಗಲು ಅನುಮತಿಸಲಾಗಿದೆ" ಎಂದಿದ್ದಾರೆ."ಉನ್ನತ ಶಿಕ್ಷಣ ಇಲಾಖೆಗೆ ಸೇರಿದ ಕಾಲೇಜುಗಳನ್ನು ಮತ್ತು ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಇತರ ಶೈಕ್ಷಣಿಕ ಸಂಸ್ಥೆಗಳು/ ಟುಟ್ಯೋರಿಯಲ್ಸ್/ಕಾಲೇಜುಗಳು ಮುಂದಿನ ಆದೇಶದವರೆ ಮುಚ್ಚಲ್ಪಟಿರುತ್ತವೆ. ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವೈದ್ಯಕೀಯ ಸಂಸ್ಥೆಗಳ ಪುನರಾರಂಭ (ವೈದ್ಯಕೀಯ /ದಂತ ಕಾಲೇಜುಗಳು, ಆಯುಷ್ ಗೆ ಸಂಬಂಧಿಸಿದ ಕಾಲೇಜುಗಳು ಮತ್ತು ಸಂಸ್ಥೆಗಳು , ನರ್ಸಿಂಗ್ ಕಾಲೇಜುಗಳು ಮತ್ತು ಇತರ ಅಲೈಡ್ ಹೆಲ್ತ್ ಕೇರ್ ಶೈಕ್ಷಣಿಕ ಸಂಸ್ಥೆಗಳು / ಕಾಲೇಜುಗಳು) ಕೊರೊನಾ ಮಾರ್ಗಸೂಚಿ ಹಾಗೂ ಸಂಬಂಧಪಟ್ಟ ಇಲಾಖೆಗಳು ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಷರತ್ತುಗಳೊಂದಿಗೆ ತೆರೆಯಲು ಅನುಮತಿಸಲಾಗಿದೆ. ವಿದ್ಯಾರ್ಥಿಗಳು, ಬೋಧನೆ ಮತ್ತು ಬೋಧಕೇತರ/ಇತರ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆಯ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ತೆಗೆದುಕೊಂಡು ಮಾತ್ರ ಕಾಲೇಜುಗಳು/ಸಂಸ್ಥೆಗಳಿಗೆ ಹಾಜರಾಗಲು ಅನುಮತಿಸಲಾಗಿದೆ" ಎಂದು ಹೇಳಿದ್ದಾರೆ.
"ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಾಸ್ಕ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು" ಎಂದು ತಿಳಿಸಿದ್ದಾರೆ.