ಬಂಟ್ವಾಳ,ಆ.14 (DaijiworldNews/HR): ದೇಶ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದರೆ, ಸ್ವಾತಂತ್ರ್ಯ ಹೋರಾಟದ ಅಮೂಲ್ಯ ಕುರುಹುಗಳು ಕಲ್ಲಡ್ಕ ಮ್ಯೂಸಿಯಂನಲ್ಲಿಯೂ ಗಮನ ಸೆಳೆಯುತ್ತಿದೆ.
ಚಮತ್ಕಾರಗಳುಳ್ಳ ನೋಟು ಸಂಗ್ರಹದಲ್ಲೇ ಪ್ರಸಿದ್ಧಿ ಪಡೆದಿರುವ ಕಲ್ಲಡ್ಕ ಮ್ಯೂಸಿಯಂ ನ ಸ್ಥಾಪಕ ಯಾಸಿರ್ ಕಲ್ಲಡ್ಕರ ಸಂಗ್ರಹದಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಪ್ರಕಟವಾಗುತ್ತಿದ್ದ ಪತ್ರಿಕೆಗಳೂ ಇವೆ.
1947 ರ ಆಗಸ್ಟ್ 1 ರಿಂದ 15 ತಾರೀಖಿನ ವರೆಗಿನ ಪತ್ರಿಕೆಗಳ ಪೈಕಿ ಆ.5 ನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ಯಾಸಿರ್ ಅವರ ಸಂಗ್ರಹದಲ್ಲಿದ್ದು, ಒಂದೊಂದು ಪತ್ರಿಕೆಗಳೂ ಅಂದಿನ ಹೋರಾಟದ ಆಗುಹೋಗುಗಳನ್ನು ನೆನಪಿಸುವುದರ ಜೊತೆಗೆ ಅಧ್ಯಯನಕಾರರಿಗೆ ದೊಡ್ಡ ಆಸ್ತಿಯೇ ಸರಿಣ. ದ ಸ್ಟೇಟ್ಸ್ ಮ್ಯಾನ್ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಆಗಿನ ಪತ್ರಿಕೆಯಲ್ಲಿ ಬ್ರಿಟಿಷ್ ಆಡಳಿತ ಹಾಗೂ ಆಗಿನ ರಾಷ್ಟ್ರೀಯ ಕಾಂಗ್ರೇಸ್ ನ ವಿಚಾರಧಾರೆಗಳು ದಾಖಲಾಗಿದೆ.
ಇನ್ನು ಆಗಿನ ಕಾಂಗ್ರೇಸ್ ಪ್ರಕಟಿಸಿದ್ದ ಸುಮಾರು 60 ಪುಟಗಳ ದಿ ಲೀಡರ್ ಎನ್ನುವ ಪುರವಣಿಯೊಂದು ಆಗಿನ ಕಾಂಗ್ರೇಸ್ ನ ಸಮಗ್ರ ಇತಿಹಾಸವನ್ನೇ ಹೇಳುತ್ತಿದೆ. ಜೊತೆಗೆ 1947 ರಲ್ಲಿ ನೆಹರೂ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಚಿತ್ರಗಳು ಯಾಸಿರ್ ಅವರ ಸಂಗ್ರಹದಲ್ಲಿದೆ. 75 ವರ್ಷಗಳಾಗಿ ಮಿತಿಯನ್ವಯ ಶಿಥಿಲಾವಸ್ಥೆಗೆ ತಲುಪಿದ್ದರೂ ಮುಂದಿನ ತಲೆಮಾರಿಗೂ ಅದನ್ನು ಕಾಪಿಡುವ ಉದ್ದೇಶಕ್ಕೆ ಅವುಗಳನ್ನು ಡಿಜಿಟಲೀಕರಣಗೊಳಿಸುವ ಯೋಚನೆ ಯಾಸಿರ್ ಅವರಲ್ಲಿದೆ.
ಸ್ವಾತಂತ್ರ್ಯ ದೊರೆತ 15-08-1947 ರ ದಿನಾಂಕದ ಸಂಖ್ಯೆಗಳನ್ನು ಹೊತ್ತ ನೋಟುಗಳ ಸ್ವಾರಸ್ಯಕರ ಸಂಗ್ರಹ ಯಾಸಿರ್ ಅವರಲ್ಲಿದೆ. ಆರ್ ಬಿ ಐ ಪ್ರಕಟಿಸಿದ್ದ ಸಾವಿರ ಬೆಲೆಯ ನೋಟಿನಿಂದ ತೊಡಗಿ 500,100,50,20,10,5 ರುಪಾಯಿಯ ನೋಟುಗಳಲ್ಲಿಯೂ ಸ್ವಾತಂತ್ರ್ಯ ದಿನಗಳೇ ಕಾಣುತ್ತಿದೆ. ಹಲವು ವಿಶಿಷ್ಟತೆಗಳ ಜೊತೆಯಲ್ಲಿ ಮಿಂಚುತ್ತಿರುವ ಕಲ್ಲಡ್ಕ ಮ್ಯೂಸಿಯಂ ನ ಈ ಸಂಗ್ರಹಗಳು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವಕ್ಕೂ ಕಳೆ ತಂದುಕೊಟ್ಟಿದೆ.