ಬೈಂದೂರು, ಅ 26(SM): 'ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷದ ಕೇಂದ್ರ ಸರ್ಕಾರದ ಕಾರ್ಯವೈಖರಿ, ಸಾಧನೆ, ಭ್ರಷ್ಟಾಚಾರ ಮುಕ್ತ ಆಡಳಿತ, ಜನರಿಗೆ ನೀಡಿದ ಕೊಡುಗೆ, ಜಾಗತಿಕವಾಗಿ ಗಳಿಸಿದ ಪ್ರಶಂಸೆಗಳನ್ನು ಮುಂದಿಟ್ಟುಕೊಂಡು ಶಿವಮೊಗ್ಗ ಲೋಕಸಭಾ ಕೇತ್ರದ ಉಪಚುನಾವಣೆಯಲ್ಲಿ ಮತ ಯಾಚಿಸಲಾಗುವುದು. ಅದರಿಂದಾಗಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಗರಿಷ್ಠ ಅಂತರದ ಮತಗಳಿಂದ ಜಯ ಗಳಿಸುವ ಭರವಸೆ ಇದೆ' ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಬೈಂದೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 'ರಾಘವೇಂದ್ರ ಹಿಂದೆ ಐದು ವರ್ಷ ಇದೇ ಕ್ಷೇತ್ರದ ಸಂಸದರಾಗಿದ್ದರು. ಆಗ ಬೈಂದೂರು ಕ್ಷೇತ್ರದಲ್ಲಿ ಮೀನುಗಾರಿಕಾ ಬಂದರು, ಜಟ್ಟಿ, ರಸ್ತೆಗಳಿಗೆ ದೊಡ್ಡ ಮೊತ್ತದ ಅನುದಾನ ತಂದಿದ್ದರು. ಅವರ ಬಗ್ಗೆ ಮತದಾರರಲ್ಲಿ ಒಳ್ಳೆಯ ಅಭಿಪ್ರಾಯವಿದೆ' ಎಂದರು.
'ಇಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿಯಾಗಿರುವ ಕಾಂಗ್ರೆಸಿಗರಲ್ಲಿ ಆತಂಕವನ್ನುಂಟು ಮಾಡಿದೆ. ಬಿಜೆಪಿಯನ್ನು ವಿರೋಧಿಸುವ ಏಕೈಕ ಉದ್ದೇಶದಿಂದ ಪಕ್ಷದ ಕೈ ಚಿಹ್ನೆಯನ್ನು ಜೆಡಿಎಸ್ಗೆ ಅಡವು ಇಟ್ಟಂತಾಗಿದೆ ಎಂಬ ಭಾವನೆ ತಳೆದಿದ್ದಾರೆ. ಇನ್ನೊಂದೆಡೆ ಮೈತ್ರಿ ಸರ್ಕಾರದ ಎರಡು ಪಕ್ಷಗಳು ಎರಡು ತೀರಗಳಾಗಿವೆ. ಸರ್ಕಾರ ನಿಷ್ಕ್ರಿಯವಾಗಿದೆ. 6 ತಿಂಗಳಿನಿಂದ ಸಂಧ್ಯಾ ಸುರಕ್ಷ ಹಣ ನೀಡಿಲ್ಲ. ಶೂನ್ಯ ಬಡ್ಡಿ ಸಾಲದ ಸಬ್ಸಿಡಿ ನೀಡದಿರುವುದರಿಂದ ಮೀನುಗಾರರು ಬ್ಯಾಂಕ್ಗೆ ಬಡ್ಡಿ ತೆರುತ್ತಿದ್ದಾರೆ. ನಾಡದೋಣಿಗಳ ಹೆಚ್ಚುವರಿ ಸೀಮೆ ಎಣ್ಣೆ ಬೇಡಿಕೆ ಈಡೇರಿಸಿಲ್ಲ. ಸಮುದ್ರ ತಡೆಗೋಡೆ ಗುತ್ತಿಗೆದಾರರು ಹಣಮಾಡುವ ದಾರಿಯಾಗಿದೆ' ಎಂದು ಟೀಕಿಸಿದರು.
ಸದನದಲ್ಲಿ ನಿದ್ರಿಸುತ್ತಿದ್ದ ಸಿದ್ದು..!
'ಸತತ ಐದು ಬಾರಿ ಆಯ್ಕೆಯಾದ, ಕಳೆದ ಚುನಾವಣೆಯಲ್ಲಿ 52 ಸಾವಿರ ಮತಗಳ ಅಂತರದಿಂದ ಗೆದ್ದ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುರಿತು ಸಿದ್ಧರಾಮಯ್ಯ ಏಕವಚನದಲ್ಲಿ ಮಾತನಾಡಿದ್ದಾರೆ. ಅವರನ್ನು ಸದನದಲ್ಲಿ ಕಂಡೇ ಇಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸದಸನದಲ್ಲಿ ನಿದ್ದೆ ಮಾಡುತ್ತಿದ್ದುದರಿಂದಾಗಿ ಹಾಲಾಡಿಯವರನ್ನು ಕಂಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.