ಕಾಸರಗೋಡು, ಅ 11 : ಸವಾರರನ್ನು ತಡೆದು ನಗದು ,ಮೊಬೈಲ್, ಸ್ಕೂಟರ್ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಆದೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರನ್ನು ಮಂಞಪಾರದ ಸಾಬಿತ್(25), ಮೈಂದನ್ಪಾರದ ಅಬ್ದುಲ್ ಅಝೀಜ್, ಮುಳ್ಳೇರಿಯದ ಜಾಫರ್ ಎಂದು ಗುರುತಿಸಲಾಗಿದೆ.ಇನ್ನೋರ್ವ ಆರೋಪಿ ನೌಷಾ ದ್ಗಾಗಿ ಆರೋಪಿ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಕ್ಟೊಬರ್ 6 ರಂದು ರಾತ್ರಿ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದಾಗ ಬೆಳ್ಳೂರು ಕುಳದಪಾರೆಯಲ್ಲಿ ವಾಸ ಮಾಡುತ್ತಿದ್ದ ಇಡುಕ್ಕಿ ನಿವಾಸಿಗಳಾದ ಸೈಜುಜೋಸ್, ಸಜಿನ್ ರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿ 1500 ನಗದು ಹಾಗೂ ಮೊಬೈಲ್ ಅಪಹರಿಸಿ ಪರಾರಿಯಾಗಿದ್ದರು. ಬಳಿಕ ಸುಳ್ಯದಲ್ಲಿ ತಲೆಮರೆಸಿ ಕೊಂಡಿದ್ದರು. ಮಾಹಿತಿ ತಿಳಿದು ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾಗಿದ್ದು , ಬಳಿಕ ನಡೆಸಿದ ತನಿಖೆಯಿಂದ ಮುಳ್ಳೇರಿಯ ಪೇಟೆಯಿಂದ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.