ಮಂಗಳೂರು, ಆ 14 (DaijiworldNews/PY): ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮಂಗಳೂರಿನ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯ 6 ಕೋಟಿ ರೂ. ದಂಡ ವಿಧಿಸಿ, ಮಹತ್ವದ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಾಂದರ್ಭಿಕ ಚಿತ್ರ
ಈ ಪ್ರಕರಣದ ಆರೋಪಿಯನ್ನು ಮಂಗಳೂರಿನ ಬಲ್ಲಾಳ್ಬಾಗ್ ನಿವಾಸಿ ಅನಿಲ್ ಹೆಗ್ಡೆ ಎಂದು ಗುರುತಿಸಲಾಗಿದೆ.
ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರುದಾರ ಪದವಿನಂಗಡಿ ಮುಗ್ರೋಡಿಯ ನಿವಾಸಿ ಡ್ಯಾನಿ ಆಂಟನಿ ಪಾವ್ಲ್ ಅವರಿಗೆ ಆರೋಪಿ ಅನಿಲ್ ಹೆಗ್ಡೆ ಅವರು 5,15,73,798 ರೂ. ಪಾವತಿ ಮಾಡಬೇಕಾಗಿತ್ತು. ಈ ಸಂಬಂಧ 3,00,00,000 ರೂ. ಹಾಗೂ 2,15,73,978 ರೂ. ಮೊತ್ತದ ಎರಡು ಚೆಕ್ಗಳನ್ನು ನೀಡಿದ್ದರು. ಈ ಚೆಕ್ಗಳನ್ನು ಬ್ಯಾಂಕ್ಗೆ ಹಾಕಿದಾಗ ಅನಿಲ್ ಹೆಗ್ಡೆ ಅವರ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚೆಕ್ ಅಮಾನ್ಯಗೊಂಡಿದ್ದವು. ಈ ಕುರಿತು ದೂರುದಾರ ಡ್ಯಾನಿ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಜೆಎಂಎಫ್ಸಿ ನಾಲ್ಕನೇ ನ್ಯಾಯಾಲಯ ಆರೋಪಿಗೆ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸಿದೆ. "ಆರೋಪಿ ಒಟ್ಟು 6,08,57,000 ರೂ. ದಂಡ ಮೊತ್ತ ಪಾವತಿಸಬೇಕು. ದಂಡ ಮೊತ್ತ ಪಾವತಿಸಲು ತಪ್ಪಿದ್ದಲ್ಲಿ ಆರೋಪಿಯು ಎರಡು ವರ್ಷಗಳ ಸಾದಾ ಸಜೆ ಅನುಭವಿಸಬೇಕು" ಎಂದು ನ್ಯಾಯಾಲಯ ತೀರ್ಪು ನೀಡಿದೆ.
"ದಂಡ ಮೊತ್ತದ ಪೈಕಿ 6,08,50,000 ರೂ. ಅನ್ನು ದೂರುದಾರರಿಗೆ ಹಾಗೂ 7,000 ರೂ. ಅನ್ನು ನ್ಯಾಯಾಲಯದ ವೆಚ್ಚವಾಗಿ ಪಾವತಿಸಬೇಕು" ಎಂದು ನ್ಯಾಯಾಲಯ ಆದೇಶ ನೀಡಿದೆ.
ನ್ಯಾಯವಾದಿ ಎಂ.ಪಿ ಶೆಣೈ ಅವರು ದೂರುದಾರರ ಪರವಾಗಿ ವಾದ ಮಂಡಿಸಿದ್ದರು.