ಉಡುಪಿ, ಅ 26(SM): ಜಿಲ್ಲಾ ಮರಳು ಹೋರಾಟ ಸಮಿತಿ ಹಾಗೂ ಇತರ ಸಂಘಟನೆಗಳು ನಡೆಸುತ್ತಿರುವ ಧರಣಿ ಶುಕ್ರವಾರವೂ ಮುಂದುವರೆದಿತ್ತು. ಈ ಸಂದರ್ಭ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್, ಪ್ರತಿಭಟನೆಯಲ್ಲಿ ಭಾಗಿಯಾಗಿ ದುರ್ಮರಣ ಹೊಂದಿದ ಮೊಹಮ್ಮದ್ ಹನೀಫ್ ಅವರ ಕುಟುಂಬಕ್ಕೆ ಸರಕಾರ ಪರಿಹಾರ ಘೋಷಿಸಬೇಕು. ಹೆಜಮಾಡಿಯ ಪರಿಸರ ಸೂಕ್ಷ್ಮ ಎಂದು ಗುರುತಿಸಲ್ಪಟ್ಟ ಕಾರಣ ಆಘಾತದಿಂದ ಅವರಿಗೆ ಹೃದಯಾಘಾತವಾಗಿದೆ. ಸರಕರಾದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದವರು ದೂರಿದರು.
ಜಿಲ್ಲಾಡಳಿತ ಕರಾವಳಿಯ ಜನರಿಗೆ ಮರಳಿನ ಕೃತಕ ಅಭಾವ ಸೃಷ್ಟಿಸಿದೆ. ಸರಕಾರ ಹಠಮಾರಿ ಧೋರಣೆಯನ್ನು ಬಿಡಬೇಕು. ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸ ಸಂಪೂರ್ಣವಾಗಿ ನಿಂತಿದೆ. 2011ರ ಸಾಂಪ್ರದಾಯಿಕ ಮರಳು ತೆಗೆಯುತ್ತಿದ್ದವರಿಗೆ ಮಾತ್ರ ಅನುಮತಿ ನೀಡಲು ಸರಕಾರ ಆದೇಶ ನೀಡಿದೆ. ಈ ಹಿಂದೆ ಸಿಆರ್ ಝೆಡ್ ನದಿಯಲ್ಲಿ 171 ಮಂದಿಗೆ ಪರವಾನಿಗೆ ಕೊಟ್ಟಿತ್ತು. 2011 ರ ಮೊದಲು ಮರಳುಗಾರಿಕೆ ಮಾಡುತ್ತಿದ್ದವರಿಗೆ ಯಾವುದೇ ಅಧಿಕೃತ ನೋಂದಾವಣಿಯನ್ನು ಮಾಡಿರಲಿಲ್ಲ.
ಹಿಂದೆ ಜಿಲ್ಲಾಧಿಕಾರಿ ಮುದ್ದು ಮೋಹನ್ ಕಾಲದಲ್ಲಿ ಹಸಿರು ಪೀಠಕ್ಕೆ ಅಫಿದವಿಟ್ ಸಲ್ಲಿಸಲಾಗಿತ್ತು. ೨೦೧೪ರಲ್ಲಿ ೧೭೧ ಮಂದಿ ಅನುಮತಿ ಪಡೆದವರಿದ್ದಾರೆಂದು ವರದಿ ಮಂಡನೆ ಮಾಡಲಾಗಿದ್ದು, ಅಷ್ಟು ಮಂದಿಗೆ ಅನುಮತಿ ಕೊಟ್ಟಿತ್ತು. 2011ರ ಮೊದಲು ಕೇವಲ 72 ಮಂದಿ ಪರವಾನಿಗೆದಾರರು ಇದ್ದರು ಎಂದು ಅವರು ಮಾಹಿತಿ ನೀಡಿದರು.
ಪರಿಸರ ಸೂಕ್ಷ್ಮ ಪ್ರದೇಶಗಳ ತೆರವು ಕಾರ್ಯಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಮಾಡುತ್ತೇವೆ. ಇದೀಗ 68 ಜನರಿಗೆ ಲೈಸೆನ್ಸ್ ಕೊಡುವುದು ಸರಿಯಿಲ್ಲ. 171 ಪರವಾನಿಗೆ ದಾರರಿಗೂ ಅನುಮತಿಯನ್ನು ಕೊಡಬೇಕು ಎಂದು ಒತ್ತಾಯಿಸಿದರು. ಟೆಂಡರ್ ಪದ್ದತಿಯನ್ನು ರದ್ದು ಮಾಡಿ, ಲೀಸ್ ಪದ್ಧತಿ ತರಬೇಕು. 2012ರ ಮರಳು ನೀತಿಯನ್ನು ರದ್ದು ಮಾಡಿ ಹೊಸ ನೀತಿಯನ್ನು ಜಾರಿಗೆ ತರಬೇಕು ಎಂದು ಶಾಸಕರು ಒತ್ತಾಯಿಸಿದರು.
171 ಮಂದಿಗೂ ಪರವಾನಿಗೆ ನೀಡುವ ತನಕ ಅನಿರ್ದಿಷ್ಟಾವಧಿ ಅಹೋ ರಾತ್ರಿ ಧರಣಿ ಮುಂದುವರೆಯಲಿದೆ ಎಂದು ಶಾಸಕ ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ.