ಉಡುಪಿ, ಅ 26(SM): ಸಿಆರ್ ಜಡ್ ವ್ಯಾಪ್ತಿಯ ಮರಳುಗಾರಿಕೆಯ ವಿಚಾರ ಹಸಿರು ಪೀಠದಲ್ಲಿರುವ ಕಾರಣ ಮರಳುಗಾರಿಕೆ ವಿಚಾರವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಾದ ಅನಿರ್ವಾಯತೆ ಇದೆ ಎಂದು ಉಡುಪಿ ಜಿಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಮರಳುಗಾರಿಕೆಯ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರ 2011ರ ಹಿಂದೆ ಮರಳುಗಾರಿಕೆ ನಡೆಸುತ್ತಿದ್ದವರಿಗೆ ಮರಳುಗಾರಿಕೆಗೆ ಅವಕಾಶ ನೀಡುವಂತೆ ಸ್ಪಷ್ಟ ಆದೇಶ ನೀಡಿದೆ. ಈ ಹಿನ್ನಲೆಯಲ್ಲಿ 2011ರ ಹಿಂದೆ ಪರಾವನಿಗೆ ಇರುವವರಿಗೆ ಸದ್ಯ ಮರಳುಗಾರಿಕೆಗೆ ಅವಕಾಶ ನೀಡಲಾಗುತ್ತಿದ್ದು, 61 ದಕ್ಕೆಗಳಿಗೆ ಪರವಾನಿಗೆ ನೀಡಲಾಗಿದೆ ಎಂದರು.
ಅವಶ್ಯಕತೆ ಇದ್ದಲ್ಲಿ 2011ರ ಹಿಂದೆ ಪರವಾನಿಗೆ ಹೊಂದಿರುವವರಿಗೆ ದಕ್ಕೆಯನ್ನು ನೀಡಲಾಗುವುದು. ಇಗಾಗಲೇ ಸ್ವರ್ಣ, ಪಾಪನಾಶಿನಿ ಹಾಗೂ ಸೀತಾನದಿ ದಂಡೆಯಲ್ಲಿ ಮರಳು ದಿಬ್ಬಗಳ ಗುರುತಿಸುವಿಕೆಯನ್ನು ಎನ್ ಐಟಿಕೆಯಿಂದ ನಡೆಸಲಾಗುತ್ತಿದೆ. ಕಳೆದ 5 ದಿವಸಗಳಿಂದ ಈ ಕೆಲಸ ನಡೆಯುತ್ತಿದ್ದು ಸೋಮವಾರ ಮರಳು ದಿಬ್ಬಗಳ ಗುರುತಿಸುವಿಕೆಯ ಕಾರ್ಯ ಬಹುತೇಕ ಮುಗಿಯುವ ಸಾಧ್ಯತೆಗಳಿವೆ ಎಂದರು.
ಸಿ ಆರ್ ಜಡ್ ವ್ಯಾಪ್ತಿಯ ಮರಳುಗಾರಿಕೆಯ ವಿಚಾರ ಹಸಿರು ಪೀಠದಲ್ಲಿರುವ ಕಾರಣ ನ್ಯಾಯಾಲಯದ ಕಾನೂನಿನ ನಿಯಮದಡಿ ಮರಳುಗಾರಿಕೆಗೆ ಅವಕಾಶ ನೀಡಲಾಗುತ್ತಿದೆ. ಕಾನೂನಾತ್ಮಕ ಒತ್ತಡ ಇದೆ ಹೊರತು ಯಾವುದೇ ರಾಜಕೀಯ ಒತ್ತಡಗಳು ಇಲ್ಲ ಎಂದು ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನ್ಸಿಸ್ ಸ್ಪಷ್ಟಪಡಿಸಿದ್ದಾರೆ.