ಮಂಡ್ಯ,ಅ 26 (MSP):ಸಾವು ಯಾವಾಗ ಬರುತ್ತೋ ಗೊತ್ತಿಲ್ಲ. ನಾನು ಇಸ್ರೇಲ್ನಲ್ಲಿ ಇರುವಾಗಲೇ ಸಾಯಬೇಕಿತ್ತು ಅದರೆ ಅದೃಷ್ಟ ಚೆನ್ನಾಗಿತ್ತು. ಹೀಗಾಗಿ ಬದುಕಿ ಬಂದೆ ಮತ್ತೆ ಯಾವಾಗ ಸಾಯುತ್ತೇನೋ ಗೊತ್ತಿಲ್ಲ.ಹೆಚ್ಚು. ನಾನು ಬದುಕಿ ಬಂದಿರುವುದೇ ನಿಮ್ಮಂತಹವರ ಸೇವೆ ಮಾಡಲಿಕ್ಕೆ ಎಂದು ಭಾವನಾತ್ಮಕವಾಗಿ ಮತದಾರರ ಮುಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಪರ ಮಳವಳ್ಳಿಯಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ಈ ಮಾತುಗಳನ್ನು ಆಡಿದ್ದಾರೆ. ಎಂತಹ ಪರಿಸ್ಥಿತಿ ಬಂದರೂ ಕೊಟ್ಟ ಮಾತಿಗೆ ಬದ್ದನಾಗಿದ್ದೇನೆ. ರಾಜ್ಯದ ಜನತೆಗೆ ನಾನು ಕೊಟ್ಟ ಮಾತಿನಿಂದ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಹೀಗಾಗಿ ನಾನು ಬದುಕಿರುವವರೆಗೂ ನನ್ನನ್ನು ನಂಬಿದ ಜನರ ನಂಬಿಕೆ ಉಳಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತೇನೆ.ಪ್ರಾಮಾಣಿಕನಾಗಿ ಕೆಲಸಮಾಡುತ್ತೇನೆ, ಅಧಿಕಾರ ಸಿಕ್ಕಿತೆಂದು ಜನತೆಯನ್ನು ಹಣ ಕೊಳ್ಳೆ ಹೊಡೆದು ಹೋಗುವ ದರಿದ್ರ ನನಗೆ ಬಂದಿಲ್ಲ ಎಂದು ಕುಮಾರಸ್ವಾಮಿ ಆಶ್ವಾಸನೆ ನೀಡಿದರು.
ಬಿಜೆಪಿ ಪಕ್ಷಕ್ಕೆ ಮಂಡ್ಯ ಎಂದರೆ ಯಾಕೋ ತಾತ್ಸರ, ಅಭಿಮಾನ ಇಲ್ಲ. ಆದರೆ ಅವರಿಗೆ ಇಲ್ಲಿನ ಜನರ ಮತ ಮಾತ್ರ ಬೇಕು. ಹೀಗಾಗಿ ನಾಚಿಕೆ ಇಲ್ಲದೆ ಮತ ಕೇಳಲು ಇಲ್ಲಿಗೆ ಬಂದಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಅವರನ್ನು ವ್ಯಕ್ತಿ ಎಂದು ತಿಳಿದು ಮತ ಹಾಕಬೇಡಿ. ನೀವು ಹಾಕುತ್ತಿರುವ ಮತ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಕೂಟದ ಸರ್ಕಾರಕ್ಕೆ ಹಾಕಿದಂತೆ. ಹೀಗಾಗಿ ಜನರೆಲ್ಲರೂ ಒಗ್ಗೂಡಿ ಶಿವರಾಮೇಗೌಡ ಅವರನ್ನು ಗೆಲ್ಲಿಸಿಸುವಂತೆ ಕೇಳಿಕೊಂಡರು.