ಮಂಗಳೂರು, ಆ 13 (DaijiworldNews/MS): ಭದ್ರತೆ ದೃಷ್ಠಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲ್ಪಟ್ಟಿರುವ ಕರಾವಳಿಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಭಯೋತ್ಪಾದಕ ಸಂಘಟನೆಗಳ ನಂಟು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕರಾವಳಿಯಲ್ಲಿ ಉಗ್ರರ ನಂಟಿನ ಬಗ್ಗೆ ಎನ್ಐಎ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ ಬಳಿಕ ಮಂಗಳೂರಿನಲ್ಲಿ ಎನ್ಐಎ ಕಚೇರಿ ಆರಂಭಿಸಲು ಆಗ್ರಹ ಕೇಳಿ ಬಂದಿತ್ತು, ಇದೀಗ ಮಂಗಳೂರಿನಲ್ಲಿ ಎನ್ಐಎ ಕಚೇರಿ ಆರಂಭಿಸುವ ಕುರಿತಂತೆ ಸಭೆಗಳು ನಡೆದಿವೆ ಎಂದು ಎನ್ಐಎ ಕಚೇರಿ ಆರಂಭಿಸುವ ಸಾಧ್ಯತೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.
ಎರಡು ದಿನಗಳ ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಸಿಎಂ ಆ. 13 ರ ಶುಕ್ರವಾರ ನಗರದ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಸಿಎಂ, "ರಾಜ್ಯದಲ್ಲಿ ಈಗಾಗಲೇ ಒಬ್ಬ ದಕ್ಷ ರನ್ನು ಗೃಹ ಸಚಿವರನ್ನಾಗಿ ಮಾಡಲಾಗಿದೆ. ಅವರು ಈಗಾಗಲೇ ಎರಡು ಸಭೆ ಮಾಡಿದ್ದು, ಮುಂದೆಯೂ ಕೆಲ ಸಭೆ ನಡೆಯಲಿದೆ. ಮುಂಬರುವ ದಿನಗಳಲ್ಲಿ ಗೃಹ ಸಚಿವರು ಕರಾವಳಿಗೆ ಭೇಟಿ ಕೊಟ್ಟು ಪರಿಶೀಲಿಸಲಿದ್ದಾರೆ.ಆ ಬಳಿಕ ನಾವೆಲ್ಲರೂ ಒಟ್ಟಾಗಿ ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ" ಎಂದು ಹೇಳಿದ್ದಾರೆ.
ಮುಂದುವರಿಸಿ ಮಾತನಾಡಿದ ಅವರು, " ಈ ಬಗ್ಗೆ ಕೆಲವು ವಿಚಾರಗಳನ್ನು ನಾವು ಬಹಿರಂಗ ಪಡಿಸಲು ಆಗೋದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ " ಎಂದು ಹೇಳುವ ಮೂಲಕ ಎನ್ಐಎ ಕಚೇರಿ ಆರಂಭಿಸುವ ಬಗ್ಗೆ ಸುಳಿವು ನೀಡಿದ್ದಾರೆ.