ಮಂಗಳೂರು, ಅ26(SS): ಡಿಸೆಂಬರ್ನಲ್ಲಿ ತೊಕ್ಕೊಟ್ಟು ಮತ್ತು ಜನವರಿಯಲ್ಲಿ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದಾರೆ.
ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಈ ಹಿಂದೆಯೇ ಹೇಳಿದಂತೆ ಡಿಸೆಂಬರ್ ತಿಂಗಳಿನಲ್ಲಿ ತೊಕ್ಕೊಟ್ಟು ಮತ್ತು ಜನವರಿಯಲ್ಲಿ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜನರ ಸಮಸ್ಯೆ ಶೀಘ್ರ ಪರಿಹಾರವಾಗಲಿದೆ ಎಂದು ಹೇಳಿದ್ದಾರೆ.
ನಗರದ ಸುರತ್ಕಲ್ ಸಮೀಪವಿರುವ ಟೋಲ್ಗೇಟ್ ವಿರುದ್ಧ ನಡೆಯುತ್ತಿರುವ ಹೋರಾಟವು ರಾಜಕೀಯ ಪ್ರೇರಿತವಾಗಿದೆ. ಸುರತ್ಕಲ್ ಸಮೀಪದ ಮುಕ್ಕ ಟೋಲ್ಗೇಟ್ ಯುಪಿಎ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿದ್ದು, ಅಂದು ಆಸ್ಕರ್ ಫೆರ್ನಾಂಡಿಸ್ ಕೇಂದ್ರ ಸಚಿವರಾಗಿದ್ದರು. ಆದರೆ ಆಗ ಯಾರೂ ಅದನ್ನು ವಿರೋಧಿಸಿರಲಿಲ್ಲ. ಆಗ ವಿರೋಧಿಸದವರು ಈಗ ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿ ಈ ಹೋರಾಟ ರಾಜಕೀಯ ಪ್ರೇರಿತ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಗಂಭೀರವಾಗಿ ಆರೋಪಿಸಿದ್ದಾರೆ.