ವರದಿ: ಮಾನಸ
ಮಂಗಳೂರು,ಅ 26: ಕೋಸ್ಟಲ್ ವುಡ್ ಹೊಸ ಅಯಾಮಗಳತ್ತ ಚಿತ್ತ ಹರಿಸಿದೆ. ಇದಕ್ಕೆ ಉದಾಹರಣೆ ಎಂದರೆ ಕರಾವಳಿಯಲ್ಲಿ ಕರಾಳ ಹಸ್ತ ಚಾಚಿಕೊಂಡಿರುವ ಎಂಡೋಸಲ್ಪನ್ ಸಮಸ್ಯೆಯನ್ನೇ ಮೂಲವಾಗಿಟ್ಟುಕೊಂಡು ಬಲಿಪೆ ಸಿನಿಮಾ ತಯಾರಾಗುತ್ತಿದೆ. ಜೀವಂತ ಸಮಸ್ಯೆಗಳನ್ನು ಆಯ್ದು, ಕಥೆ ಸಿದ್ದಪಡಿಸುವುದು ಸುಲಭವಲ್ಲ. ಆದರೆ ಈ ಸಾಹಸಕ್ಕೆ ಕೈ ಹಾಕಿದವರು ಯುವ ನಿರ್ದೇಶಕ ಪ್ರಸಾದ್ ಅರ್ವ. ಇದು ಅವರ ನಿರ್ದೇಶನ ಮೊದಲ ಚಿತ್ರವಾದರೂ ಕರಾವಳಿಯನ್ನು ಕಾಡುತ್ತಿರುವ ಎಂಡೋಸಲ್ಪನ್ ಸಮಸ್ಯೆಯನ್ನೇ ಎಳೆಯಾಗಿಸಿ ಚಿತ್ರದ ಕಥೆ ಹೆಣೆದು ಬಲಿಪೆ ಚಿತ್ರವನ್ನು ಪ್ರೇಕ್ಷಕರ ಮುಂದಿಡುವ ತಯಾರಿಯಲ್ಲಿ ತೊಡಗಿದ್ದಾರೆ.
ಪೆರಾರ ಕ್ಷೇತ್ರ, ಎಕ್ಕಾರು,ಪಡೀಲು, ಬಜ್ಪೆ ಮುಂತಾದೆಡೆ, 25 ದಿನಗಳಲ್ಲಿ ಬಲಿಪೆ ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡ, ಈಗಾಗಲೇ ಎಡಿಟಿಂಗ್ ನ್ನು ಕೈಗೆತ್ತಿಕೊಂಡಿದ್ದಾರೆ. ಕತ್ತರಿ ಪ್ರಯೋಗಕ್ಕಾಗಿಯೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿರುವ ಬಲಿಪೆ ಚಿತ್ರವನ್ನು ಮಂಗಾರು ಮಳೆ-2 ಖ್ಯಾತಿಯ ಸಂಕಲನಕಾರ ಸಂಕಲನಕಾರ ಕೆ.ಎಂ.ಪ್ರಕಾಶ್ ಅವರು ಇನ್ನಷ್ಟು ಚಂದಗಾಣಿಸುತ್ತಿದ್ದಾರೆ.
ಬಲಿಪೆ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಯುವ ಪ್ರತಿಭೆ ಕೀರ್ತನ್ ಭಂಡಾರಿ ಒಂದು ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ, ರಾಹುಲ್ ವಸಿಷ್ಠ ಸಂಗೀತ ನೀಡಿದ್ದಾರೆ. ಚಿತ್ರವನ್ನು ಹೇಮಂತ್ ಸುವರ್ಣ ಅವರು ನಿರ್ಮಿಸಿದ್ದು, ಹರ್ಷಿತ್ ಬಿ.ಸಿ. ರೋಡ್ ಹೀರೋ ಆಗಿ, ಅವರಿಗೆ ಜೋಡಿಯಾಗಿ ಅಂಕಿತಾ ಪಟ್ಲ ಅಭಿನಯಿಸಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಅರವಿಂದ ಬೋಳಾರ್, ರಂಜನ್ ಬೋಳೂರು, ಐಶ್ವರ್ಯಾ ಆಚಾರ್ಯ, ದೃತಿ ಸಾಯಿ , ದಯಾನಂದ ಕತ್ತಲ್ಸಾರ್ ಅವರ ಅಭಿನಯವಿದೆ. ಅಭಿಷೇಕ್ ಅರ್ಕುಳ ಸಹ ನಿರ್ದೇಶನ , ರಕ್ಷಿತ್ ಚಿನ್ನು ಅವರ ಛಾಯಾಗ್ರಹಣ ಮೂಡಿ ಬರುತ್ತಿವ ಚಿತ್ರವನ್ನು ಪೆಬ್ರವರಿಯಲ್ಲಿ ತೆರೆಗೆ ತರುವ ಇರಾದೆ ಚಿತ್ರತಂಡದ್ದು.