ಕೇರಳ, ಅ 26 (MSP): ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಎದುರಿಸುತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧಿಸುವಂತೆ ಒತ್ತಾಯಿಸಿ ನಡೆಸಿದ್ದ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಭಗಿನಿ ಅನುಪಮಾ ಅವರು ಮೃತ ಫಾದರ್ ಕುರಿಯಾಕೋಸ್ ಕಟ್ಟುಥರಾ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದಾಗ ಅವರನ್ನು ಪ್ರಶ್ನಿಸಿ ಅಲ್ಲಿಂದ ಹೊರದಬ್ಬಿದ ಘಟನೆ ವರದಿಯಾಗಿದೆ.
ಮೂರು ದಿನಗಳ ಹಿಂದೆ ಜಲಂಧರ್ ಸಮೀಪದ ದಸುಯಾ ಎಂಬಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಫಾದರ್ ಕಟ್ಟುಥರಾ ಅವರ ಮೃತದೇಹವನ್ನು ಕೇರಳಕ್ಕೆ ಬುಧವಾರ ತರಲಾಗಿತ್ತು. ಅವರ ಅಂತ್ಯಸಂಸ್ಕಾರದ ಕಾರ್ಯಕ್ರಮವನ್ನು ಗುರುವಾರ ಅಲಪ್ಪುಳ ಬಳಿಯ ಪಳ್ಳಿಪುರಂ ಚರ್ಚ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಗಿನಿ ಅನುಪಮಾ ಕೂಡಾ ಭಾಗವಹಿಸಿದ್ದರು. ಇದನ್ನು ಗಮನಿಸಿದ ಅಲ್ಲಿದ್ದ ಒಂದು ಗುಂಪು ಅವರನ್ನು ಇಲ್ಲಿಗೆ ಬಂದಿರೋದ್ಯಾಕೆ ಎಂದು ಪ್ರಶ್ನಿಸಿ ಹೊರದಬ್ಬಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಭಗಿನಿ ಅನುಪಮಾ, ಪ್ರತಿಭಟನೆಯಿಂದ ನನಗೆ ನೋವಾಗಿದೆ. ನಾನು ಇದೇ ಸ್ಥಳದವಳು. ಹಲವಾರು ವರ್ಷಗಳಿಂದ ಕುರಿಯಾಕೋಸ್ ಕಟ್ಟುಥರಾ ಅವರ ಪರಿಚಯ ನನಗಿದೆ. ಅವರು ನನ್ನನ್ನು ಮಗಳಂತೆ ನೋಡಿಕೊಂಡಿದ್ದರು. ನಾವು ಸತ್ಯದ ಪರವಾಗಿ ನಿಂತಿದ್ದೇವೆ, ಎಂದು ಹೇಳಿದರು.