ಮಂಗಳೂರು, ಆ 12 (DaijiworldNews/PY): "ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಶೀಘ್ರದಲ್ಲೇ ಆರೋಪಿಗಳ ಬಂಧನವಾಗುತ್ತದೆ" ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, "ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಶಾಸಕ ಸತೀಶ್ ರೆಡ್ಡಿ ಅವರೊಂದಿಗೂ ಈಗಾಗಲೇ ಮಾತನಾಡಿದ್ದೇನೆ" ಎಂದರು.
"ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ರಾತ್ರಿಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸತೀಶ್ ರೆಡ್ಡಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಈಗಾಗಲೇ ಕೃತ್ಯ ಎಸಗಿದವರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಶೀಘ್ರವೇ ಆರೋಪಿಗಳ ಬಂಧನವಾಗುತ್ತದೆ" ಎಂದು ಹೇಳಿದರು.
ಬುಧವಾರ ತಡರಾತ್ರಿ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸತೀಶ್ ರೆಡ್ಡಿ ಅವರ ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಅನ್ನು ಸುಟ್ಟು ಹಾಕಿದ್ದಾರೆ.