ನವದೆಹಲಿ,ಅ 26 (MSP): ಇದೇ ಅ.28 ರಿಂದ ಜಪಾನ್ ಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಗೆ ಜಪಾನ್ ಪ್ರಧಾನಿ ಶಿಂಜೋ ಅಬೆ ಖಾಸಗಿ ವಿಲ್ಲಾದಲ್ಲಿ ವಿಶೇಷ ಸತ್ಕಾರ ನೀಡಲು ಸಿದ್ದತೆ ನಡೆಸಿದ್ದಾರೆ.
ಶಿಂಜೋ ಅಬೆ ಭಾರತಕ್ಕೆ ಆಗಮಿಸಿದಾಗ ಪ್ರಧಾನಿ ಮೋದಿ ಒದಗಿಸಿದ ಅದ್ದೂರಿ ಔತಣಕೂಟದ ಮಾದರಿಯಲ್ಲೇ, ಜಪಾನ್ ನ ಅತ್ಯುನ್ನತ ಶಿಖರವಾದ ಮೌಂಟ್ ಫ್ಯೂಜಿಯಲ್ಲಿರುವ ಯಮನಶಿ ವಿಲ್ಲಾದಲ್ಲಿ ಮೋದಿಗೆ ಖಾಸಗಿ ಔತಣ ಕೂಟ ಏರ್ಪಡಿಸಲಾಗಿದೆ. ಜಪಾನ್ನ ಕೆಲವೇ ಪ್ರಮುಖ ನಾಯಕರು ಮತ್ತು ಸಂಸದರಿಗೆ ಈ ಔತಣಕೂಟಕ್ಕೆ ಹಾಜರಾಗುವಂತೆ ಆಹ್ವಾನ ನೀಡಲಾಗಿದೆ. ಭಾರತ- ಜಪಾನ್ ನಡುವಿನ ವಾರ್ಷಿಕ ಶೃಂಗದಲ್ಲಿ ಭಾಗವಹಿಸಲು ಮೋದಿ.28 ರಂದು ಜಪಾನ್ ಗೆ ತೆರಳುವರು.
ಜಪಾನ್ ಭೇಟಿಯಲ್ಲಿ ರಕ್ಷಣೆ ಹಾಗೂ ಪ್ರಾದೇಶಿಕ ಭದ್ರತೆ ಕುರಿತ ವಿಚಾರಕ್ಕೆ ಸಂಬಂಧಿಸಿ ಉಭಯ ನಾಯಕರು ಚರ್ಚಿಸಲಿದ್ದಾರೆ. ಅ.28ರಂದು ಬೆಳಗ್ಗೆ ಯಮನಶಿಗೆ ಭೇಟಿ ನೀಡಲಿರುವ ಮೋದಿ, ಅಬೆ ಜೊತೆ ಮಾತುಕತೆ ನಡೆಸಲಿದ್ದಾರೆ. ಅಲ್ಲಿಂದ ಯಮನಶಿ ಎಫ್ಎಎನ್ಯುಸಿ ರೊಬೊಟಿಕ್ಸ್ ಘಟಕಕ್ಕೆ ಭೇಟಿ ನೀಡಿ, ಸಂಜೆ ಔತಣ ಕೂಟಕ್ಕೆ ಹಾಜರಾಗಲಿದ್ದಾರೆ.