ಮಂಗಳೂರು,ಅ 26 (MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್1 ಎನ್1 ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಬಂಟ್ವಾಳದ ಸಜಿಪನಾಡು ಎಂಬಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಝರೀನಾ (22) ಅ.16ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಸೇರಿದಂತೆ ಅದೇ ಕುಟುಂಬದ ನಾಲ್ವರು ಜ್ವರದಿಂದ ಸಾವಿಗೀಡಾಗಿದ್ದರು. ಇದಲ್ಲದೆ ನಗರದ ಹೊರವಲಯದ ವಾಮಂಜೂರು ಮಲ್ಲೂರು ನಿವಾಸಿ ಅಬ್ದುಲ್ಲ (50) ಅ. 3 ರಂದು ಮತ್ತು ಉಳ್ಳಾಲ ಹಳೆಕೋಟೆ ನಿವಾಸಿ ಜಮೀಲಾ (38) ಅಕ್ಟೋಬರ್ 8ರಂದು ಎಚ್1 ಎನ್1 ಗೆ ಬಲಿಯಾಗಿದ್ದರು.
ಎಚ್1 ಎನ್1 ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಈಗಾಗಲೇ ಶಂಕಿತ ಎಚ್1 ಎನ್1 ನಿಂದ ಮೃತಪಟ್ಟ ನಾಲ್ವರ ಮನೆ ಸುತ್ತಮುತ್ತ ತೆರಳಿ ಸರ್ವೆ ಕಾರ್ಯ ನಡೆಸಲಾಗಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದರೂ ಈ ವೈರಸ್ ಬಾಧೆ ಹೆಚ್ಚುತ್ತಲೇ ಇದೆ. 11ದಿನಗಳ ಹಿಂದೆಯಷ್ಟೇ 29 ಮಂದಿಗೆ ಎಚ್1 ಎಚ್1 ಕಂಡುಬಂದಿದ್ದರೆ, ಗುರುವಾರದ ವೇಳೆಗೆ ಸಂಖ್ಯೆ 39 ಕ್ಕೆ ಏರಿದೆ.
ಒಂಬತ್ತು ದಿನಗಳ ಅಂತರದಲ್ಲಿ ಹತ್ತು ಮಂದಿಯಲ್ಲಿ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದೆ. ಈ ಪೈಕಿ ಕೆಲವರು ಗುಣಮುಖರಾಗಿ ಮನೆಗೆ ತೆರಳಿದರೆ ಉಳಿದವರು ವಿವಿಧ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ತಿಳಿಸಿದೆ.
ಈ ವರ್ಷ ಜನವರಿಯಿಂದ ಇಲ್ಲಿವರೆಗೆ ಒಟ್ಟು 403 ಮಂದಿಯನ್ನು ಎಚ್1 ಎನ್1 ಪರೀಕ್ಷೆಗೊಳಪಡಿಸಲಾಗಿದ್ದು, 39ಪಾಸಿಟಿವ್ ಪ್ರಕರಣ ದಾಖಲಾಗಿವೆ.
ಅ.14 ರ ವರೆಗೆ ಜಿಲ್ಲೆಯಲ್ಲಿ ಒಟ್ಟು 14 ಎಚ್1 ಎನ್1 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದರೆ, ಅ 25 ರ ವೇಳೆಗೆ ಈ ಸಂಖ್ಯೆ 24ಕ್ಕೇರಿದೆ. ಸೆಪ್ಟಂಬರ್ ನಲ್ಲಿ ಒಟ್ಟು 12 ಪ್ರಕರಣಗಳ ಪೈಕಿ ಬಹುತೇಕ ಮಂಗಳೂರಿನದ್ದಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸದ್ಯ ಎಚ್1 ಎನ್1 ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ ರಾಮಕೃಷ್ಣ ರಾವ್ ತಿಳಿಸಿದ್ದಾರೆ.