ಮಂಗಳೂರು, ಆ.11 (DaijiworldNews/HR): ದಕ್ಷಿಣ ಕನ್ನಡದಲ್ಲಿ ಆ.15ರಿಂದ ಮತ್ತೆ ಲಾಕ್ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ, ಈ ಬಗ್ಗೆ ಜಿಲ್ಲಾಡಳಿತದ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವುದು ನಿಜ. ಆದರೆ ಅತ್ಯಂತ ಸುಸಜ್ಜಿತ ಆಧುನಿಕ ಆಸ್ಪತ್ರೆಗಳು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಕಾಸರಗೋಡು ಸೇರಿದಂತೆ ಕೇರಳ ರಾಜ್ಯದ ಜತೆ ದ.ಕ. ಜಿಲ್ಲೆ ಗಡಿ ಹಂಚಿಕೊಂಡಿರುವುದರಿಂದ ಸಹಜವಾಗಿ ಪಾಸಿಟಿವಿಟಿ ದರದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಆದರೆ ಜಿಲ್ಲೆಯಲ್ಲಿ ಪ್ರತಿನಿತ್ಯ ಕೋವಿಡ್ ತಪಾಸಣಾ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ ಒಂದು ದಿನದಲ್ಲಿ 9900 ಮಂದಿಗೆ ಕೋವಿಡ್ ತಪಾಸಣೆ ಮಾಡಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ಲಾಕ್ಡೌನ್ ಮಾಡುವಂತಹ ಪರಿಸ್ಥಿತಿ ಇಲ್ಲ" ಎಂದರು.
ಇನ್ನು "ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯ ಸರಕಾರದ ನಿರ್ದೇಶನದ ಮೇರೆಗೆ ಕ್ರಮ ವಹಿಸಲಾಗುತ್ತದೆ. ಆದರೆ ಆಗಸ್ಟ್ 15ರ ಬಳಿಕ ಜಿಲ್ಲೆಯಲ್ಲಿ ಮತ್ತೆ ಲಾಕ್ಡೌನ್ ಮಾಡಲಾಗುತ್ತದೆ ಎಂಬುದು ಊಹಪೂಹ ಸುದ್ದಿಯಾಗಿದ್ದು, ಸದ್ಯಕ್ಕೆ ಲಾಕ್ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ, ಈ ಬಗ್ಗೆ ಜಿಲ್ಲಾಡಳಿತದ ಮುಂದೆ ಯಾವುದೇ ಪ್ರಸ್ತಾಪವಿಲ್ಲ" ಎಂದು ತಿಳಿಸಿದ್ದಾರೆ.