ಬಂಟ್ವಾಳ, ಆ.11 (DaijiworldNews/HR): ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಳ ಗ್ರಾಮದಲ್ಲಿ ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಪೆಟ್ರೋಲಿಯಂ ಪೈಪ್ ಲೈನ್ ಕೊರೆದು ಪೈಪ್ ಅಳವಡಿಸಿ ಲಕ್ಷಾಂತರ ಮೌಲ್ಯದ ಡೀಸೆಲ್ ಕಳವು ಜಾಲದ ಪ್ರಮುಖ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಐವನ್ ಚಾರ್ಲೋ ಪಿಂಟೋ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲೆ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಪೊಲೀಸ್ ಉಪಾಧೀಕ್ಷಕರು, ಬಂಟ್ವಾಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ನೇತೃತ್ವದ ತಂಡ ಆರೋಪಿ ಐವನ್ ಚಾರ್ಲ್ ಪಿಂಟೋನನ್ನು ಬಂಧಿಸಿದ್ದಾರೆ.
ಬಂಧಿತನಿಂದ ಕೃತ್ಯಕ್ಕೆ ಬಳಸಿದ ಒಂದು ಜೀಪ್, ಡಿಸೇಲ್ ಕೊಂಡು ಹೋಗಲು ಬಳಸಿದ ಕ್ಯಾನ್ ಗಳು ಮತ್ತು ಡಿಸೇಲ್ ನ್ನು ವಶಕ್ಕೆ ಪಡೆದುಕೊಂಡಿದ್ದು, ನಂತರ ಕೃತ್ಯದಲ್ಲಿ ಪೈಪ್ ಲೈನ್ ಗೆ ಹೋಲ್ ತೆಗೆದು ವೆಲ್ಡಿಂಗ್ ಮಾಡಿ ಪೈಪ್ ಲೈನ್ ಅಳವಡಿಸಿದ ವೆಲ್ಡರ್ ಗಳಾದ ಪಚ್ಚನಾಡಿ ಬೋಂದೆಲ್ ನಿವಾಸಿ ಅಜಿತ್ ಮತ್ತು ಕಣ್ಣೂರು ನಿವಾಸಿ ಜೋಯೆಲ್ ಪ್ರೀತಮ್ ಡಿʻಸೋಜನನ್ನು ಕೂಡ ಬಂಧಿಸಿದ್ದಾರೆ.
ಪ್ರಕರಣದಲ್ಲಿ ಉಳಿದ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಇನ್ನು ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ, ಹೆಚ್.ಸಿಗಳಾದ ಜನಾರ್ಧನ, ಗೋಣಿಬಸಪ್ಪ, ಸುರೇಶ್ ಪಿ.ಸಿಗಳಾದ ಮನೋಜ್, ಪುನೀತ್ ರವರು ಪಾಲ್ಗೊಂಡಿದ್ದಾರೆ.