ಮಂಗಳೂರು, ಅ 26 (MSP): ಮಂಗಳೂರಿಗರು ಎಟಿಎಂ ಗೆ ಹೋಗೋ ಮುನ್ನಾ ಒಮ್ಮೆ ಯೋಚಿಸಿ..ರಾಜಧಾನಿ ಬೆಂಗಳೂರಿನಂತಹ ಮಹಾನಗರದಲ್ಲಿ ಹೆಚ್ಚಾಗಿ ಕಂಡುಬರುವ ಎಟಿಎಂ ಸ್ಕಿಮ್ಮಿಂಗ್ ಪ್ರಕರಣ ಮಂಗಳೂರಿಗೂ ಕಾಲಿಟ್ಟಿದೆ. ಹೀಗಾಗಿ ಅವಸರ - ಅವಸರವಾಗಿ ಎಟಿಎಂ ಗೆ ನುಗ್ಗಿ ಹಣ ಡ್ರಾ ಮಾಡುವ ಮೊದಲು ಒಮ್ಮೆ ಯೋಚಿಸಿ, ಜಾಗರೂಕರಾಗಿ ಹಣ ಡ್ರಾ ಮಾಡುವುದು ಒಳಿತು.
ಎಟಿಎಂಗೆ ಸ್ಕಿಮ್ಮಿಂಗ್ ಅಂದರೆ ಯಂತ್ರವೊಂದನ್ನು ಬಳಸಿ ಎಟಿಎಂ ಕಾರ್ಡ್ನ ಮಾಹಿತಿಯನ್ನು ಕದ್ದು ನಡೆಸುವ ವಂಚನೆ ಇದಾಗಿದೆ. ಸ್ಕಿಮ್ಮರ್ ಎಂಬ ಹೆಸರಿನ ಚಿಕ್ಕ ಯಂತ್ರವೊಂದನ್ನು ಎಟಿಎಂ ಯಂತ್ರಕ್ಕೆ ಅಳವಡಿಸಲಾಗುತ್ತದೆ ಬಳಿಕ ಡೆಬಿಟ್, ಕ್ರೆಡಿಟ್ ಕಾರ್ಡ್ ಡಾಟಾ ಕದ್ದು ಎಟಿಎಂ ಹಾಗೂ ಆನ್ ಲೈನ್ ಮೂಲಕ ಹಣ ಲೂಟಿ ಮಾಡುವ ಡಿಜಿಟಲ್ ಕಳ್ಳತನ. ಹಾಗೆಂದು ಕೇವಲ ಸ್ಕಿಮ್ಮರ್ ಮಾತ್ರ ಸಾಲುವುದಿಲ್ಲ. ವಂಚಕರು ಗ್ರಾಹಕರ ಎಟಿಎಂ ಪಿನ್ ನಂಬರ್ ತಿಳಿಯಲು ಎಟಿಎಂ ಗೆ ಕೆಮರಾ ಅಳವಡಿಸುತ್ತಾರೆ ಅಥವಾ ಬ್ಯಾಂಕ್ನ ಕೆಮರಾ ಹ್ಯಾಕ್ ಮಾಡುತ್ತಾರೆ. ಇದಾದ ಬಳಿಕ ಪಿನ್ ನಂಬರ್ ತಿಳಿದುಕೊಂಡು ಆನ್ಲೈನ್ ಖರೀದಿಗಳನ್ನು ನಡೆಸುತ್ತಾರೆ ಅಥವಾ ತದ್ರೂಪಿ ಕಾರ್ಡ್ ತಯಾರಿಸುತ್ತಾರೆ.
ಈ ರೀತಿ ವಂಚನೆ ಎಸಗುವವರ ಜಾಲವೇ ಇದ್ದು ಈ ಖದೀಮರ ತಂಡ ಇದೀಗ ಕರಾವಳಿಗೂ ಕಾಲಿಟ್ಟಿದೆ. ಮಂಗಳೂರಿನಲ್ಲಿ ಈ ಬಗ್ಗೆ ಈಗಾಗಲೇ ನಾಲ್ಕು ದೂರುಗಳು ದಾಖಲಾಗಿದೆ. ಮಣ್ಣಗುಡ್ಡೆ ಮತ್ತು ಕುದ್ರೋಳಿಯ ಕೆನರಾ ಬ್ಯಾಂಕ್ ಎಟಿಎಂ ಹಾಗೂ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಸುರತ್ಕಲ್ ಎನ್ ಐ ಟಿಕೆ ಅವರಣದ ಎಟಿಎಂ ಗಳಲ್ಲಿ ಈ ರೀತಿ ಹಣ ದರೋಡೆ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ನಾಲ್ವರು ನಗರದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.ಉತ್ತರ ಭಾರತದ ಸ್ಕಿಮ್ಮಿಂಗ್ ಖದೀಮರು ತಮ್ಮ ಜಾಲದ ಸದಸ್ಯರನ್ನು ಮಂಗಳೂರಿಗೂ ಕಳುಹಿಸಿದ್ದು, ಅವರು ನಗರದಲ್ಲಿ ತಮ್ಮ ಕೈ ಚಳಕ ತೋರಲಾರಂಭಿಸಿದ್ದಾರೆ. ಇದಕ್ಕಾಗಿ ನೇಮಕಗೊಂಡಿರುವ ಖದೀಮರು ನೈಜೀರಿಯನ್ ಪ್ರಜೆಗಳು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.