ಶಿವಮೊಗ್ಗ, ಅ 25(SM): ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬಿಸಿ ಬಿಸಿ ಸುದ್ದಿ ಚರ್ಚೆಯಾಗುತ್ತಿದ್ದು, ಇದೀಗ ಮಾಜಿ ಪ್ರಧಾನಿ ದೇವೇಗೌಡರಿಗೆ ಮಾಜಿ ಸಿಎಂ ಯಡಿಯೂರಪ್ಪ ಸವಾಲೊಂದನ್ನು ಹಾಕಿದ್ದಾರೆ. ಮುಂದಿನ ತಿಂಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ತಾಕತ್ತಿದ್ದರೆ ಮೂರು ಸ್ಥಾನಗಳನ್ನು ಗೆದ್ದು ತೋರಿಸಿ ಎಂದು ಸವಾಲೆಸೆದಿದ್ದಾರೆ.
ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ, ತಾವು ಸಿಎಂ ಆಗಬಾರದು ಎಂಬ ಕಾರಣಕ್ಕೆ 37 ಸೀಟುಗಳನ್ನು ಪಡೆದಿರುವ ನೀವು ಕಾಂಗ್ರೆಸ್ ಜೊತೆ ಸೇರಿಕೊಂಡು ಸರ್ಕಾರ ರಚಿಸಿದ್ದೀರಲ್ಲವೇ ಎಂದು ಟೀಕಿಸಿದರು.
ದಕ್ಷಿಣದಲ್ಲಿ ಬಿಜೆಪಿಯ ಬಾಗಿಲು ಮುಚ್ಚುವುದಾಗಿ ಹೇಳಿರುವ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಬ್ಬಾಗಿಲು ಮುಚ್ಚಿಸೋಕೆ ನೀವು ಯಾರು? ಮೊದಲು ಮೂರು ಲೋಕಸಭೆ ಉಪ ಚುನಾವಣೆಯಲ್ಲಿ ಗೆದ್ದುಬನ್ನಿ ಎಂದು ಸವಾಲು ಹಾಕಿದ್ದಾರೆ. ಉಪ ಚುನಾವಣೆಯಲ್ಲಿ ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಈಗಾಗಲೇ ಗೆದ್ದಿದೆ. ಇನ್ನೊಂದು ಕ್ಷೇತ್ರ ಗೆಲ್ಲುವುದು ಮಾತ್ರ ಬಾಕಿ ಇದೆ ಎಂದರು.